ಬೆಂಗಳೂರು: ದಂಡಪಿಂಡ ಅಂದಿದ್ದಕ್ಕೆ ಅಣ್ಣನೇ ತಮ್ಮನನ್ನು ಕೊಲೆ ಮಾಡಿರುವ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ನಗರದ ಬೇಗೂರಿನ ಲಕ್ಷ್ಮೀಪುರದಲ್ಲಿ ಈ ಘಟನೆ ನಡೆದಿದೆ. ಪ್ರತಾಪ್ (18 ವರ್ಷ) ಕೊಲೆಯಾದ ದುರ್ದೈವಿ. ರಜನಿ (28 ವರ್ಷ) ಕೊಲೆ ಮಾಡಿದ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಗೂರು ಠಾಣೆ ಪೋಲಿಸರು (Police) ಆರೋಪಿ ರಜನಿಯನ್ನು ಬಂಧಿಸಿದ್ದಾರೆ.
ಸಾವನ್ನಪ್ಪಿರುವ ವ್ಯಕ್ತಿ ಪ್ರತಾಪ್ ಮೆಕ್ಯಾನಿಕ್ ಆಗಿದ್ದ. ಅನಾರೋಗ್ಯದ ಹಿನ್ನೆಲೆಯಲ್ಲಿ ಆರೋಪಿ ರಜನಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ. ಹೀಗಾಗಿ ಕೆಲಸಕ್ಕೆ ಹೋಗದ ವಿಚಾರಕ್ಕೆ ರಜನಿ ಮತ್ತು ಪ್ರತಾಪ್ ಜಗಳ ನಡೆದಿದೆ. ಈ ಜಗಳದಲ್ಲಿ ಕೊಲೆಯಾಗಿರುವ ಪ್ರತಾಪ್ ದಂಡಪಿಂಡ ಎಂದು ಬೈದಿದ್ದಾನೆ. ಇದರಿಂದ ಜಗಳ ಮತ್ತಷ್ಟು ವಿಕೋಪಕ್ಕೆ ತೆರಳಿದೆ.
ಈ ವೇಳೆ ಇಬ್ಬರೂ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ತಾಯಿ ಬಿಡಿಸಲು ಬಂದರೂ ಅಣ್ಣ-ತಮ್ಮಂದಿರ ಜಗಳ ನಿಂತಿಲ್ಲ. ಆಗ ರಜನಿ ಅಡುಗೆ ಮನೆಗೆ ತೆರಳಿ ಚಾಕು ತಂದು, ತಮ್ಮ ಪ್ರತಾಪ್ ನ ಎದೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಪ್ರತಾಪ್ ಕುಸಿದು ಬಿದ್ದಿದ್ದಾನೆ. ಆನಂತರ ರಜಿನಿ ನಾಪತ್ತೆಯಾಗಿದ್ದು, ಪ್ರತಾಪ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪ್ರತಾಪ್ ಸಾವನ್ನಪ್ಪಿದ್ದಾರೆ. ಈ ಕುರಿತು ಬೇಗೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ರಜನಿಯನ್ನು ಬಂಧಿಸಿದ್ದಾರೆ.