ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚತರ ಜತೆ ಚಾಟ್ ಮಾಡುವುದು, ಇಬ್ಬರೂ ಫ್ರೆಂಡ್ಸ್ ಆಗುವುದು, ಬಳಿಕ ಪ್ರೀತಿಸುವ, ಮದುವೆಯಾಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಹಾಗೆಯೇ, ಜಾಲತಾಣದಲ್ಲಿ ಪರಿಚಯವಾದವರು ಭೇಟಿಯಾಗಲು ಹೋದಾಗ ಕೊಲೆ, ಅತ್ಯಾಚಾರ ನಡೆದಿರುವ ಪ್ರಕರಣಗಳೂ ಜಾಸ್ತಿಯಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲಿ ಬ್ರಿಟನ್ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ. ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದವನನ್ನು ಭೇಟಿಯಾಗಲು ಬಂದ ಮಹಿಳೆ ಮೇಲೆ ಆತನೇ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.
ದೆಹಲಿಯ ಮಹಿಪಾಲ್ ಪುರದ ಲಾಡ್ಜ್ ಒಂದರಲ್ಲಿ ಮಹಿಳೆಯ ಮೇಲೆ ಆಕೆಯ ಗೆಳೆಯ ಕೈಲಾಶ್ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಕೂಡಲೇ ಕೈಲಾಶ್ ನನ್ನು ಬಂಧಿಸಿದ್ದಾರೆ. ಅಲ್ಲದೆ, ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೈಲಾಶ್ ಗೆಳೆಯ ವಾಸಿಂ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೆಹಲಿಯ ಕೈಲಾಶ್ ಹಾಗೂ ಬ್ರಿಟನ್ ಮಹಿಳೆಯು ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದಾರೆ. ಇತ್ತೀಚೆಗೆ ಮಹಿಳೆಯು ಮಹಾರಾಷ್ಟ್ರ ಹಾಗೂ ಗೋವಾ ಪ್ರವಾಸಕ್ಕೆಂದು ಭಾರತಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ಮಹಿಳೆಯು ಕೈಲಾಶ್ ಗೆ ಕರೆ ಮಾಡಿ, ನೀನೂ ಬಾ ಎಂದಿದ್ದಾರೆ. ಆಗ ಕೈಲಾಶ್, ನನಗೆ ಬರಲು ಆಗುವುದಿಲ್ಲ, ನೀನೇ ದೆಹಲಿಗೆ ಬಾ ಎಂದಿದ್ದಾನೆ. ಹಾಗಾಗಿ, ದೆಹಲಿಗೆ ಬಂದ ಮಹಿಳೆಯು ಮಹಿಪಾಲ್ ಪುರದಲ್ಲಿ ಲಾಡ್ಜ್ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಹಿಳೆ ಇದ್ದ ಲಾಡ್ಜಿಗೆ ಕೈಲಾಶ್ ಹಾಗೂ ಆತನ ಗೆಳೆಯ ವಾಸಿಂ ಹೋಗಿದ್ದಾರೆ. ಲಾಡ್ಜಿಗೆ ಬಂದ ಕೈಲಾಶ್ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯು ಮರುದಿನ ಬೆಳಗ್ಗೆ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಶಿಷ್ಟಾಚಾರದಂತೆ ಬ್ರಿಟಿಷ್ ಹೈ ಕಮಿಷನ್ ಗೆ ಮಾಹಿತಿ ನೀಡಿದ್ದಾರೆ.