ಬೆಂಗಳೂರು: ಬ್ರಾಂಡ್ ಬೆಂಗಳೂರು ಅಡಿ ಬಸವನಗುಡಿಯನ್ನು ಧಾರ್ಮಿಕ ಹಾಗೂ ಪಾರಂಪರಿಕ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಬೇಕು ಎನ್ನುವ ಸ್ಥಳೀಯ ಮುಖಂಡರ ಮನವಿಗೆ ಸರ್ಕಾರ ಸ್ಪಂದಿಸಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಸವನಗುಡಿ ಕಡಲೆಕಾಯಿ ಪರಿಷೆ ಉದ್ಘಾಟಿಸಿ ಮಾತನಾಡಿದ ಅವರು, ”ಕಡಲೆಕಾಯಿ ಪರಿಷೆಯಿಂದ ರೈತರಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂದು ಈ ಬಾರಿ ಸುಂಕ ಸಂಗ್ರಹವನ್ನು ರದ್ದು ಮಾಡಿದ್ದೇವೆ. ಈ ವರ್ಷದಿಂದ ಸುಂಕವಿಲ್ಲದ ಕಡಲೆಕಾಯಿ ಪರಿಷೆ ಪ್ರಾರಂಭವಾಗಿದೆ. ನಾನೂ ಸಹ ಕಡಲೆಕಾಯಿ ಕೃಷಿ ಮಾಡಿದ್ದೇನೆ. ಕಡಲೆಕಾಯಿ ಬಡವರ ಬಾದಾಮಿಯಾಗಿದೆ. ಒಂದು ಕೆ.ಜಿ ಬಾದಾಮಿಗೆ 1 ಸಾವಿರ ರೂಪಾಯಿ ಬೆಲೆಯಿದೆ, ಅದೇ ಕಡಲೆಕಾಯಿಗೆ 50 ರೂಪಾಯಿ ಬೆಲೆಯಿದೆ ಎಂದಿದ್ದಾರೆ.
ಬೆಂಗಳೂರಿನ ಸುತ್ತಲಿನ ರೈತರು ಇಲ್ಲಿಗೆ ಬಂದು, ನಮ್ಮ ಶ್ರಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಕೆಂಪೇಗೌಡರು ರೈತರನ್ನು ಉಳಿಸಲು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರು ನಡೆಯೋಣ. ವೃಷಭಾವತಿ ನದಿ ಜನಿಸುವ ಸ್ಥಳದಲ್ಲಿ ನಿಂತು ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸದಲ್ಲಿ ನಾವೆಲ್ಲರೂ ನಿರತರಾಗಿದ್ದೇವೆ ಎಂದಿದ್ದಾರೆ.