ಬೆಂಗಳೂರು : ಚಿಕ್ಕಪುಟ್ಟ ವ್ಯಾಪಾರಸ್ಥರ ಬದುಕಿಗೆ ಕೊಳ್ಳಿ ಇಟ್ಟ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆಗೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ನಿರ್ಧಾರ ಮಾಡಿದೆ.
ಜುಲೈ ೨೩ ಮತ್ತು ೨೪ ರಂದು ಕಪ್ಪು ಪಟ್ಟಿ ಧರಿಸಿ ಹಾಲು, ಟೀ ಕಾಫಿ ಮತ್ತು ಹಾಲಿನ ಉತ್ಪನ್ನಗಳನ್ನು ಮಾರದೆ ಪ್ರತಿಭಟನೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಮುಂದಾಗಿದ್ದು, ಜುಲೈ ೨೫ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವ್ಯಾಪಾರ ವಹಿವಾಟನ್ನು ಸ್ವಯಂ ಪ್ರೇರಿತವಾಗಿ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಿದೆ.
ಬೇಕರಿ ಕಾಂಡಿಮೆಂಟ್ಸ್ ಮತ್ತು ಸಣ್ಣ ಉದ್ಯಮಿದಾರರ ವತಿಯಿಂದ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು, ಇಲಾಖೆಯ ಕೆಂಗಣ್ಣಿಗೆ, ಪುಡಿರೌಡಿಗಳ ಕಿರುಕುಳಕ್ಕೆ ಗುರಿಯಾಗೋರೇ ಬೇಕರಿ ಕಾಂಡಿಮೆಂಟ್ಸ್ ಹಾಗೂ ಬೀದಿಬದಿ ವ್ಯಾಪಾರಿಗಳು. ಸಣ್ಣಪುಟ್ಟ ಉದ್ದಿಮೆದಾರರಿಗೆ ಮರಣ ಶಾಸನದಂತೆ ತೆರಿಗೆಯ ನೊಟೀಸ್ ಕಳಿಸಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
2021ರಿಂದ ತಾವು ತೆರಿಗೆಯನ್ನು ಬಾಕಿ ಇಟ್ಟಿದ್ದೀರಿ, ಫೋನ್ ಪೇ- ಯುಪಿಐ ಟ್ರ್ಯಾನ್ಸ್‌ಕ್ಷನ್ ಮೇಲೆ ವಿವರ ತೆಗೆದುಕೊಂಡು ತೆರಿಗೆ ಹಾಕುತ್ತಿದ್ದಾರೆ. 5ಲಕ್ಷದಿಂದ 2ಕೋಟಿಯವರೆಗೂ ತೆರಿಗೆ ಹಾಕುತ್ತಿದ್ದಾರೆ.
2021ರಿಂದ ಇಲ್ಲಿಯವರೆಗೂ ಯಾವುದೇ ರೀತಿ ಮಾಹಿತಿ ನೀಡದೇ ಏಕಾಏಕಿ ಈ ರೀತಿ ನೊಟೀಸ್ ಕೊಟ್ಟಿದ್ದಾರೆ. ನಾಡಿನ ಅಭಿವೃದ್ಧಿಗೆ ತೆರಿಗೆ ಅತ್ಯವಶ್ಯಕ. ಆದರೆ ಹೂ-ಹಣ್ಣು,ಹಾಲು ಮಾರುವವರಿಗೆ ನೊಟೀಸ್ ಕೊಟ್ಟಿದ್ದೀರಿ. ಬಡವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದ್ಧಾರೆ.



















