ಬೆಂಗಳೂರು : ನೆಲಮಂಗಲ ತಾಲ್ಲೂಕಿನ ಮುದ್ದಲಿಂಗನಹಳ್ಳಿ ಗೇಟ್‌ನಲ್ಲಿ ಇಂದು ಭೀಕರ ದುರಂತ ನಡೆದಿದೆ. ತನ್ನ ಪೋಷಕರಿಗೆ ತಿಳಿಸದೆ ನಾಯಿ ಹುಡುಕಲು ಹೋಗಿದ್ದ 16 ವರ್ಷದ ಬಾಲಕ ರೈಲಿಗೆ ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ. ಯೋಗೇಂದ್ರ ಮೃತ ಬಾಲಕ.

ಯೋಗೇಂದ್ರನು ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಶ್ರೀನಿವಾಸ್ ಮತ್ತು ಚನ್ನಮ್ಮ ದಂಪತಿಯ ಪುತ್ರನಾಗಿದ್ದಾನೆ. ಮನೆಯಲ್ಲಿನ ಸಾಕು ನಾಯಿ ಕಾಣೆಯಾಗಿದ್ದ ಹಿನ್ನೆಲೆ ಯೋಗೇಂದ್ರ ಹುಡುಕಲು ಹೊರಟಿದ್ದ, ಈ ವೇಳೆ ದುರಂತಕ್ಕೆ ಬಲಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಲಾಂಗ್ ಜಂಪ್‌ನಲ್ಲಿ ಕ್ರೀಡಾ ಪಟು ಆಗಿದ್ದ ಯೋಗೇಂದ್ರ ಶಾಲಾ ಹಂತದಲ್ಲಿಯೂ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದರು.
ಸ್ಥಳಕ್ಕೆ ಯಶವಂತಪುರ ರೈಲ್ವೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಯೋಗೇಂದ್ರನನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ನಂತರ ಅವರು ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆದಿದ್ದು, ಶವದ ಬಳಿ ಪೋಷಕರು ಆಕ್ರಂದನ ವ್ಯಕ್ತಪಡಿಸಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.
ಇದನ್ನೂ ಓದಿ : ಸಾಲು ಸಾಲು ರಜೆ | ಹೊಸಕೋಟೆ ಬಸ್ ನಿಲ್ದಾಣದಲ್ಲಿ ಜನವೋ ಜನ ; ಪ್ರಯಾಣಿಕರ ಪರದಾಟ



















