ವಿಜಯಪುರ : 5 ದಿನಗಳ ಹಿಂದೆ ವಾಚ್ ಗಾಗಿ 9 ನೇ ತರಗತಿಯ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದು, ಬಾಲಕ ಸಾವನ್ನಪ್ಪಿದ್ದಾನೆ. ತಡರಾತ್ರಿ ಶಾಲೆ ಎದುರು ಬಾಲಕನ ಮೃತದೇಹ ಇಟ್ಟು ಕುಟುಂಬಸ್ಥರು ಪ್ರತಿಭಟನೆ ಮಾಡಿರುವ ಘಟನೆ ವಿಜಯಪುರ ತಾಲೂಕಿನ ಯೋಗಾಪೂರ ಗ್ರಾಮದಲ್ಲಿ ನಡೆದಿದೆ.
ಬಿಹಾರ್ ಮೂಲದ ಸುನೀಲ್ ಎಂಬಾತನ ಪುತ್ರ ಅನ್ಸ್ (11) ಸಾವನ್ನಪ್ಪಿದ ಬಾಲಕ.
ಶ್ರೀಸತ್ಯ ಸಾಯಿಬಾಬಾ ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
5 ದಿನಗಳ ಹಿಂದೆ ಕೈಗಡಿಯಾರಕ್ಕಾಗಿ 9ನೇ ತರಗತಿಯ ಮೂವರು ವಿದ್ಯಾರ್ಥಿಗಳು ಅನ್ಸ್‌ನನ್ನು ಥಳಿಸಿ ವಾಚ್ ಕಿತ್ತುಕೊಂಡಿದ್ದರು. ಬಳಿಕ ಅಸ್ವಸ್ಥಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
ಈ ವಿಚಾರ ಶಾಲಾ ಮುಖ್ಯಸ್ಥರಿಗೆ ಹೇಳಿದರೂ, ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಬಾಲಕನ ಮೃತದೇಹವನ್ನು ಶಾಲೆಯ ಮುಂದೆ ಇಟ್ಟು ಪ್ರತಿಭಟನೆ ಮಾಡಿದ್ದಾರೆ.
ಪೊಲೀಸರ ಮಧ್ಯಸ್ಥಿಕೆಯಲ್ಲಿ ಕುಟುಂಬಸ್ಥರು ಪ್ರತಿಭಟನೆ ಕೈಬಿಟ್ಟು, ಬಾಲಕನ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.