ಬೆಂಗಳೂರು : ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು, ಮಾಜಿ ಸಿಎಂಗಳ ಪುತ್ರರಿಬ್ಬರಿಗೆ ಸೋಲಿನ ಭೀತಿ ಎದುರಾಗಿದೆ.
ಸದ್ಯದ ಟ್ರೆಂಡಿಂಗ್ ನಂತೆ ರಾಜ್ಯದ ಎಲ್ಲ ಮೂರೂ ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಇನ್ನೂ ಕೆಲವು ಮತಗಳ ಎಣಿಕೆ ಬಾಕಿಯಿದ್ದು, ಮುನ್ನಡೆ ಗಮನಿಸಿದರೆ, ಮಾಜಿ ಸಿಎಂ ಪುತ್ರರಿಗೆ ಸೋಲಿನ ಭೀತಿ ಕಾಡುತ್ತಿದೆ.
ಸಂಡೂರಿನಲ್ಲಿ 15 ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 8,239 ಮತಗಳ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ 78, 277 ಮತ್ತು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರಿಗೆ 70,038 ಮತಗಳು ಬಂದಿವೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭಾರೀ ಅಂತರ ಕಾಯ್ದುಕೊಂಡಿದ್ದಾರೆ. 10ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರ್ಜರಿ ಮುನ್ನಡೆ ಸಾಧಿಸಿದ್ದು, 19,793 ಮತಗಳ ಅಂತರದಿಂದ ಮುಂದೆ ಇದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ – 61,265, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ – 41,472 ಮತಗಳನ್ನು ಪಡೆದಿದ್ದಾರೆ. ಹೀಗಾಗಿ ನಿಖಿಲ್ ಗೆಲ್ಲುವ ಕನಸು ನುಚ್ಚು ನೂರರಾಗುವ ಲಕ್ಷಣ ಗೋಚರಿಸುತ್ತಿವೆ.
ಶಿಗ್ಗಾಂವಿಯಲ್ಲಿ 12ನೇ ಸುತ್ತಿನ ಮತಎಣಿಕೆಯ ನಂತರ, ಕಾಂಗ್ರೆಸ್ಸಿನ ಯಾಸೀರ್ ಅಹ್ಮದ್ ಖಾನ್ ಪಠಾಣ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿಯ ಭರತ ಬೊಮ್ಮಾಯಿ 60,055 ಮತ್ತು ಕಾಂಗ್ರೆಸ್ಸಿನ ಯಾಸೀರ್ ಖಾನ್ ಪಠಾಣ್ 72,306 ಮತಗಳನ್ನು ಪಡೆದಿದ್ದಾರೆ. ಹೀಗಾಗಿ ಸದ್ಯದ ಟ್ರೆಂಡ್ ನಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.