ನವದೆಹಲಿ: ಮದುವೆಯಾಗಿ ಒಂದೆರಡು ವರ್ಷಕ್ಕೇ ವಿಚ್ಛೇದನ ಪಡೆಯುವ ಕಾಲವಿದು. ಒಣ ಪ್ರತಿಷ್ಠೆ, ದಾಂಪತ್ಯದಲ್ಲಿ ಅಹಂಕಾರ, ಕ್ಷಮಿಸುವ ಗುಣ ಇರದಿರುವುದೇ ವಿಚ್ಛೇದನಕ್ಕೆ ಕಾರಣ ಎಂದು ತಜ್ಞರು, ಅನುಭವಿಗಳು ಹೇಳುತ್ತಾರೆ. ಇಂತಹದ್ದರಲ್ಲಿ, ಬ್ರೆಜಿಲ್ ನಲ್ಲಿ ಮನೋಯೆಲ್ ಆ್ಯಂಜೆಲಿಮ್ ದಿನೊ (105) ಹಾಗೂ ಮಾರಿಯಾ ಡಿ ಸೌಸಾ ದಿನೊ ಎಂಬ ದಂಪತಿಯು ವೈವಾಹಿಕ ಜೀವನಕ್ಕೆ ಕಾಲಿಟ್ಟೇ 86 ವರ್ಷಗಳಾಗಿವೆ. ಈಗಲೂ ಇವರಿಬ್ಬರು ಅನ್ಯೋನ್ಯವಾಗಿದ್ದು, ನಿಜವಾದ ಆದರ್ಶ ದಂಪತಿ ಎನಿಸಿದ್ದಾರೆ.
ಹೌದು, ಇವರಿಬ್ಬರೂ 1940ರಲ್ಲಿ ಮದುವೆಯಾಗಿದ್ದು, 86 ವರ್ಷಗಳಿಂದಲೂ “ಸಿಹಿಯಾದ” ದಾಂಪತ್ಯ ನಡೆಸುತ್ತಿದ್ದಾರೆ. ಇವರಿಬ್ಬರ ಆಯುಷ್ಯ, ದಾಂಪತ್ಯವು ಈಗ ಗಿನ್ನಿಸ್ ವಿಶ್ವದಾಖಲೆ ಬರೆದಿದೆ ಎಂದರೆ ನಂಬಲೇಬೇಕು. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಮಾಹಿತಿ ಪ್ರಕಾರ, ಮನೋಯೆಲ್ ಆ್ಯಂಜೆಲಿಮ್ ದಿನೊ 1919ರಲ್ಲಿ ಜನಿಸಿದರೆ, ಮಾರಿಯಾ ಡಿ ಸೌಸಾ ದಿನೊ 1923ರಲ್ಲಿ ಜನಿಸಿದ್ದಾರೆ. ಇಬ್ಬರೂ ಶತಾಯುಷಿಗಳಾದರೂ ಆರೋಗ್ಯ, ದಾಂಪತ್ಯದ ಆರೋಗ್ಯ ಕಾಪಾಡಿಕೊಂಡಿರುವುದು ಪ್ರತಿಯೊಬ್ಬರಿಗೂ ಮಾದರಿಯಾಗಿದೆ.
100ಕ್ಕೂ ಅಧಿಕ ಮೊಮ್ಮಕ್ಕಳು
ಯಶಸ್ವಿ ದಾಂಪತ್ಯ ಮಾತ್ರವಲ್ಲದೆ, ಇವರ ಮನೆ ತುಂಬ ಮಕ್ಕಳು, ಮೊಮ್ಮಕ್ಕಳೇ ತುಂಬಿದ್ದಾರೆ. ಇವರಿಗೆ 13 ಮಕ್ಕಳಿದ್ದು, 55 ಮೊಮ್ಮಕ್ಕಳಿದ್ದಾರೆ. ಅಲ್ಲದೆ, 54 ಮರಿಮೊಮ್ಮಕ್ಕಳು ಇವರ ಕಣ್ಣೆದುರು ಆಡಿಕೊಂಡಿದ್ದಾರೆ. ಮರಿಮೊಮ್ಮಕ್ಕಳಿಗೂ 12 ಮಕ್ಕಳಿರುವುದು ಮತ್ತೊಂದು ಅಚ್ಚರಿಯಾಗಿದೆ. ಇವರ ಮನೆತುಂಬ ಪ್ರೀತಿಯೇ ತುಂಬಿದ್ದು, ಜಗತ್ತೇ ದಂಪತಿಗೆ ಶುಭ ಹಾರೈಸಿದೆ.
ಪ್ರೇಮ ವಿವಾಹ
ಮನೋಯೆಲ್ ಆ್ಯಂಜೆಲಿಮ್ ದಿನೊ ಹಾಗೂ ಮಾರಿಯಾ ಡಿ ಸೌಸಾ ದಿನೊ ಅವರದ್ದು ಪ್ರೇಮವಿವಾಹ. ಇಬ್ಬರದ್ದೂ ಕೃಷಿ ಕಾರ್ಮಿಕರ ಕುಟುಂಬವಾದ ಕಾರಣ 1936ರಲ್ಲಿ ಇವರಿಬ್ಬರೂ ಜಮೀನೊಂದರಲ್ಲಿ ಭೇಟಿಯಾದರು. ಮೊದಲ ನೋಟಕ್ಕೆ ಮನೋಯೆಲ್ ಆ್ಯಂಜೆಲಿಮ್ ದಿನೊ ಅವರಿಗೆ ಮಾರಿಯಾ ಮೇಲೆ ಪ್ರೀತಿಯಾಗಿತ್ತು. ಅದನ್ನು ತಡಮಾಡದೆ ಹೇಳಿಯೂ ಬಿಟ್ಟರು. ಮಾರಿಯಾ ಕೂಡ ಇದಕ್ಕೆ ಸಮ್ಮತಿ ಸೂಚಿಸಿದರು. ನಾಲ್ಕು ವರ್ಷ ಪ್ರೀತಿಸಿದ ಬಳಿಕ ಇವರು ಮದುವೆಯಾದರು. ಅಲ್ಲಿಂದ ಇಲ್ಲಿಯವರೆಗೆ ಇವರ ಪ್ರೀತಿಯ ದೋಣಿ ಸಾಗುತ್ತಲೇ ಇದೆ.