ಮುಂಬೈ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಯಾಣಿಸುವ ಏರ್ ಇಂಡಿಯಾ ಒನ್ ವಿಮಾನದ ಮೇಲೆ ದಾಳಿ ನಡೆಸುವುದಾಗಿ ಉಗ್ರರು ಬೆದರಿಕೆ ಹಾಕಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಮೋದಿ ಅವರು ನಾಲ್ಕು ದಿನಗಳ ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸಕ್ಕೆ ತೆರಳುವ ಮೊದಲು ಈ ಬೆದರಿಕೆ ಸ್ವೀಕರಿಸಲಾಗಿತ್ತು.
ಪ್ರಧಾನಿ ಮೋದಿ ತಮ್ಮ ಅಧಿಕೃತ ಭೇಟಿಗೆ ತೆರಳುತ್ತಿರುವಾಗ ಅವರ ವಿಮಾನದ ಮೇಲೆ ಭಯೋತ್ಪಾದಕರು ದಾಳಿ ಮಾಡಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ಮುಂಬೈ ಪೊಲೀಸರಿಗೆ ಕಳುಹಿಸಲಾಗಿತ್ತು.
ಫೆಬ್ರವರಿ 11 ರಂದು ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ಪ್ರಧಾನಿ ಮೋದಿ ವಿದೇಶಕ್ಕೆ ಅಧಿಕೃತ ಭೇಟಿಗೆ ತೆರಳುತ್ತಿರುವಾಗ ಅವರ ವಿಮಾನದ ಮೇಲೆ ಭಯೋತ್ಪಾದಕರು ದಾಳಿ ನಡೆಸುತ್ತಾರೆ ಎಂದು ಎಚ್ಚರಿಸಲಾಗಿತ್ತು. ಪ್ರಕರಣದ ಸ್ವರೂಪವನ್ನು ಪರಿಗಣಿಸಿ, ಪೊಲೀಸರು ಇತರ ಸಂಸ್ಥೆಗಳಿಗೆ ಮಾಹಿತಿ ನೀಡಿ ತನಿಖೆ ಆರಂಭಿಸಿದ್ದರು.
ವಿಶೇಷ ತಪಾಸಣೆ
ಪ್ರಧಾನಿ ಮೋದಿ ಪ್ರಯಾಣಿಸುವ ವಿಮಾನದ ಮೇಲೆ ವದಾಳಿಯ ಬೆದರಿಕೆ ಬಂದ ನಂತರ ವಿಮಾನದ ಬಗ್ಗೆ ವಿಶೇಷ ತಪಾಸಣೆ ನಡೆಸಲಾಗಿದೆ. ಅದೇ ರೀತಿ ಸಂದೇಶದ ಕರೆ ಮಾಡಿರುವ ವ್ಯಕ್ತಿ ಯಾರೆಂದು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ.
ನರೇಂದ್ರ ಮೋದಿ ಅವರು ಮೂರು ದಿನಗಳ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಫ್ರಾನ್ಸ್‌ನ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಮಂಗಳವಾರ ಆತ್ಮೀಯವಾಗಿ ಬರಮಾಡಿಕೊಂಡಿದ್ದರು.
ಪ್ಯಾರಿಸ್‌ನಲ್ಲಿ ಮಂಗಳವಾರ ನಡೆದ ‘ಎಐ ಆ್ಯಕ್ಷನ್’ ಶೃಂಗಸಭೆಯಲ್ಲಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರೊಂದಿಗೆ ಸಹ ಅಧ್ಯಕ್ಷತೆ ವಹಿಸಿದ್ದರು.
ಮೋದಿ ಇಂದು ಅಮೆರಿಕಕ್ಕೆ ತೆರಳಲಿದ್ದಾರೆ. ಈ ಸಮಯದಲ್ಲಿ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ.