ಬೆಂಗಳೂರು | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನಗರದ ಕೆಲವು ಮಾಲ್ಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಮೋಹಿತ್ ಕುಮಾರ್ ಎಂಬಾತ ‘ಜೈಶ್-ಎ-ಮೊಹಮ್ಮದ್’ ಉಗ್ರ ಸಂಘಟನೆ ಹೆಸರಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಇ-ಮೇಲ್ ವಿಳಾಸಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಹಾಗೂ ನಗರದ ಆಯ್ದ ಪ್ರಮುಖ ಶಾಪಿಂಗ್ ಮಾಲ್‌ಗಳನ್ನು ಸ್ಫೋಟಿಸುವುದಾಗಿ ಇ-ಮೇಲ್ ಕಳುಹಿಸಿದ್ದಾರೆ. ಇದರಿಂದ ಬೆಂಗಳೂರು ನಗರದಲ್ಲಿ ಮತ್ತೆ ಬಾಂಬ್ ಬೆದರಿಕೆ ಆತಂಕ ಸೃಷ್ಟಿಸಿದೆ.
ಕೆಂಪೇಗೌಡ ಏರ್ಪೋರ್ಟ್, ನಗರದ ಕೆಲವು ಮಾಲ್ಗಳನ್ನ ಸ್ಫೋಟಿಸುವುದಾಗಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಹೆಸರಿನಲ್ಲಿ ನವೆಂಬರ್ 30ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಧಿಕೃತ ಇ-ಮೇಲ್‌ಗೆ ಕಳುಹಿಸಲಾಗಿದೆ. ಮೋಹಿತ್ ಕುಮಾರ್ ಎನ್ನುವಾತನೇ ಈ ಇ ಮೇಲ್ ಸಂದೇಶ ಕಳುಹಿಸಿದ್ದ. ಕೂಡಲೇ ಎಚ್ಚೆತ್ತ ಪೊಲೀಸರು, ವಿಮಾನ ನಿಲ್ದಾಣ ಮತ್ತು ಹೆಸರಿಸಲಾದ ಮಾಲ್‌ಗಳ ಸುತ್ತಮುತ್ತ ತೀವ್ರ ಭದ್ರತಾ ತಪಾಸಣೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳಗಳು ಸ್ಥಳಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ. ಮೋಹಿತ್ ಕುಮಾರ್ ಎಂಬಾತನಿಂದ ಹುಸಿ ಬಾಂಬ್ ಇ-ಮೇಲ್ ಬಂದಿದೆ ಎಂದು ಪೊಲಿಸರು ಖಚಿತಪಡಿಸಿದ್ದು, ಈ ಬಗ್ಗೆ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್‌ನಲ್ಲಿ mohitkumar.er989799@gmail.com ಎನ್ನುವ ಇ ಮೇಲ್ ಐಡಿ ಮೇಲೆ ಎಫ್ಐಆರ್ ದಾಖಲಾಗಿದೆ.
ಬೆದರಿಕೆ ಮೇಲ್‌ನಲ್ಲಿ ಏನಿತ್ತು?
ಬೆದರಿಕೆದಾರನು ತನ್ನನ್ನು ʼಜೈಶ್-ಎ-ಮೊಹಮ್ಮದ್ ವೈಟ್ ಕಾಲರ್ ಟೆರರ್ ಟೀಮ್’ (Jaish-e-Mohammed White collar terror team) ಎಂದು ಪರಿಚಯಿಸಿಕೊಂಡು, ಇಂಗ್ಲಿಷ್‌ನಲ್ಲಿ ಸಂದೇಶ ಬರೆದಿದ್ದಾನೆ. ಜೈಶ್-ಎ-ಮೊಹಮ್ಮದ್ ವೈಟ್ ಕಾಲರ್ ಟೆರರ್ ಟೀಮ್‌ನಿಂದ ಇದೊಂದು ಎಚ್ಚರಿಕೆ. ನಾವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು, ಒರಿಯನ್ ಮಾಲ್, ಲುಲು ಮಾಲ್ , ಫೋರಂ ಸೌತ್ ಮಾಲ್, ಮಂತ್ರಿ ಸ್ಕ್ವೇರ್ ಮಾಲ್‌ಗಳನ್ನು ಗುರಿಯಾಗಿಸಿಕೊಂಡಿದ್ದೇವೆ. ಸಂಜೆ 7 ಗಂಟೆಯ ನಂತರ ಬಾಂಬ್ ಸ್ಫೋಟಗೊಳ್ಳಲಿದೆ. ನಮ್ಮ ಅಲ್ಲಾ ಮತ್ತು ನಮ್ಮ ಮಾಸ್ಟರ್ ಮೋಹಿತ್ ಅವರಿಗೆ ಧನ್ಯವಾದಗಳು. ಅಲ್ಲದೆ, ‘ಇದು ಸಂಭವಿಸದಿರಲು ಬಯಸಿದರೆ ನೀವು +91 936***8077 ಸಂಖ್ಯೆಗೆ ಕರೆ ಮಾಡಿ, ಹಣವನ್ನು ಪಾವತಿ ಮಾಡಿ ಎಂದು ಹಣಕ್ಕೆ ಬೇಡಿಕೆ ಇಡುವ ಪ್ರಯತ್ನವನ್ನೂ ಮಾಡಲಾಗಿದೆ.
ಈ ಸಂಬಂಧ ಬೆಂಗಳೂರಿನ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 173 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಇ-ಮೇಲ್ ಐಡಿಯಲ್ಲಿ ಉಲ್ಲೇಖಿಸಲಾದ ‘ಮೋಹಿತ್ ಕುಮಾರ್’ ಎಂಬಾತನೇ ಆರೋಪಿ ಅಥವಾ ಬೇರೆ ಯಾರೋ ಈ ಐಡಿ ಬಳಸಿದ್ದಾರೆ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಭಾರತ-ಸೌತ್ ಆಫ್ರಿಕಾ 2ನೇ ಏಕದಿನ ಪಂದ್ಯಕ್ಕೆ ರಾಯ್‌ಪುರ ಸಜ್ಜು | ಎಷ್ಟು ಗಂಟೆಗೆ ಆರಂಭ?



















