ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೆ ಬಾಂಬ್ ಬೆದರಿಕೆಯ ಕರೆ ಬಂದಿರುವುದಾಗಿ ವರದಿಯಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕ ಸೇವಾ ಸಂಖ್ಯೆಗೆ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಅಲ್ಲದೇ, ಕರೆ ಮಾಡಿರುವ ದುಷ್ಕರ್ಮಿ ತಾನು ಲಷ್ಕರ್-ಎ-ತೊಯ್ಬಾದ ಸಿಇಒ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಆರ್ ಬಿಐ ಕಚೇರಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಈ ಕುರಿತು ಮಾತಾ ರಮಾಬಾಯಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಗುಂಪು 2008 ರಲ್ಲಿ ಮುಂಬೈ ದಾಳಿ ನಡೆಸಿತ್ತು. ಇದು ಭಾರತದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಒಂದಾಗಿದೆ. ಆದರೆ, ಇತ್ತೀಚೆಗೆ ಶಾಲೆಗಳು, ಹೋಟೆಲ್‌ಗಳು, ವಿಮಾನ ನಿಲ್ದಾಣಗಳು, ಮಾರುಕಟ್ಟೆಗಳು, ರೈಲ್ವೆ, ಬಸ್ ಗಳು ಸೇರಿದಂತೆ ಬಾಂಬ್ ಬೆದರಿಕೆ ಕರೆಗಳು ಬರುತ್ತಿದ್ದು, ಆತಂಕ ಹೆಚ್ಚಾಗುತ್ತಿದೆ. ಆದರೆ, ಪೊಲೀಸರು ಮಾತ್ರ ಎಲ್ಲೆಡೆ ಅಲರ್ಟ್ ಆಗಿದ್ದಾರೆ.