ಇಸ್ಲಾಮಾಬಾದ್: ಪಾಕ್ ನಲ್ಲಿನ ಮಸೀದಿಯೊಂದರಲ್ಲಿ ಬಾಂಬ್ ಬ್ಲಾಸ್ಟ್ ಆಗಿರುವ ಘಟನೆಯೊಂದು ನಡೆದಿದೆ. ಪಾಕಿಸ್ತಾನದ (Pakistan) ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಮಸೀದಿಯ (Mosque) ಒಳಗಡೆ ಬಾಂಬ್ ಸ್ಫೋಟಗೊಂಡಿದ್ದು (Bomb Blast) ಐವರು ಸಾವನ್ನಪ್ಪಿದ್ದಾರೆ. ಅಲ್ಲದೇ, ಘಟನೆಯಲ್ಲಿ 20ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ನೌಶೇರಾ ಜಿಲ್ಲೆಯ ಅಕೋರಾ ಖಟ್ಟಕ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಮದರಸಾದ ಆವರಣದಲ್ಲಿರುವ ಮಸೀದಿಯಲ್ಲಿ ಶುಕ್ರವಾರದ ನಮಾಜ್ ಮಾಡುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
ಗಾಯಗೊಂಡವರಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಸಾಮಿ (ಜೆಯುಐ-ಎಸ್) ನಾಯಕ ಮೌಲಾನಾ ಹಮಿದುಲ್ ಹಕ್ ಹಕ್ಕಾನಿ ಕೂಡ ಒಬ್ಬರು ಎನ್ನಲಾಗಿದೆ. ಸ್ಫೋಟ ಸಂಭವಿಸಿದಾಗ ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಾ ಮುಂದಿನ ಸಾಲಿನಲ್ಲಿದ್ದರು. ಅಫ್ಘಾನ್ ತಾಲಿಬಾನ್‌ನೊಂದಿಗೆ ಮೌಲಾನಾ ಹಮಿದುಲ್ ಹಕ್ ಹಕ್ಕಾನಿ ಸಂಪರ್ಕ ಹೊಂದಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಗುಂಪು ಈ ಘಟನೆಯ ಹೊಣೆ ಹೊತ್ತಿಲ್ಲ. ರಂಜಾನ್ ಗಿಂತ ಮೊದಲೇ ಈ ಘಟನೆ ನಡೆದಿದ್ದು, ಪಾಕ್ ನ ಆತಂಕಕ್ಕೆ ಕಾರಣವಾಗಿದೆ.