ಪ್ಯಾರಿಸ್ ಒಲಿಂಪಿಕ್ಸ್ ನ ಕುಸ್ತಿ ಕೂಟದಿಂದ ಹೊರ ಬಿದ್ದ ವಿನೇಶ್ ಫೋಗಟ್ ಗೆ ಇಡೀ ದೇಶವೇ ಧೈರ್ಯ ತುಂಬಿದೆ.
ದೇಹದ ತೂಕ 50 ಕೆಜಿಗಿಂತಲೂ ಹೆಚ್ಚಿರುವ ಕಾರಣದಿಂದ ಕೊನೆಯ ಹಂತದಲ್ಲಿ ವಿನೇಶ್ ಫೋಗಟ್ ಅವರು ಅನರ್ಹಗೊಂಡರು. ಈ ಸುದ್ದಿ ಕೇಳಿ ಇಡೀ ಭಾರತಕ್ಕೆ ಆಘಾತವಾಗಿದೆ. ಬಾಲಿವುಡ್ ಕೂಡ ಈಗ ವಿನೇಶ್ ಫೋಗಟ್ ಹಿಂದೆ ನಿಂತಿದೆ.
ಸೆಲೆಬ್ರಿಟಿಗಳು ವಿನೇಶ್ ಫೋಗಟ್ ಪರವಾಗಿ ಪೋಸ್ಟ್ ಮಾಡಿದ್ದಾರೆ. ಆಲಿಯಾ ಭಟ್, ಫರ್ಹಾನ್ ಅಖ್ತರ್, ತಾಪ್ಸಿ ಪನ್ನು, ಕರೀನಾ ಕಪೂರ್ ಖಾನ್ ಸೇರಿದಂತೆ ಹಲವರು ವಿನೇಶ್ ಫೋಗಟ್ ಅವರಿಗೆ ಧೈರ್ಯ ತುಂಬಿದ್ದಾರೆ. ‘ನಮ್ಮ ಪಾಲಿಗೆ ನೀವೇ ಚಾಂಪಿಯನ್’ ಎಂದು ಎಲ್ಲರೂ ಹೇಳುತ್ತಿದ್ದಾರೆ.
ವಿನೇಶ್ ಫೋಗಟ್ ಅವರೇ, ನೀವು ಇಡೀ ದೇಶಕ್ಕೆ ಸ್ಫೂರ್ತಿ. ಇತಿಹಾಸ ಸೃಷ್ಟಿಸಲು ನೀವು ತೋರಿದ ಧೈರ್ಯ ಹಾಗೂ ನಿಮ್ಮ ಪರಿಶ್ರಮವನ್ನು ಯಾರೂ ಸಹ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇಂದು ನಿಮ್ಮಂತೆಯೇ ನಮಗೂ ಸಹ ಆಘಾತ ಆಗಿದೆ. ಆದರೆ, ಮಹಿಳೆಯಾಗಿ ನೀವು ಬಂಗಾರದಂತೆ, ಕಬ್ಬಿಣದಂತೆ, ಉಕ್ಕಿನಂತೆ. ಅದನ್ನು ನಿಮ್ಮಿಂದ ಯಾರೂ ಕಸಿದುಕೊಳ್ಳಲು ಆಗುವುದಿಲ್ಲ. ನೀವೇ ಚಾಂಪಿಯನ್. ನಿಮ್ಮಂತೆ ಬೇರೆ ಯಾರೂ ಇಲ್ಲ’ ಎಂದು ಆಲಿಯಾ ಭಟ್ ತಮ್ಮ ಸಾಮಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಿಮಗೆ ಎಷ್ಟು ನೋವಾಗಿದೆ ಎಂಬುವುದನ್ನು ನಾವು ಕಲ್ಪನೆ ಮಾಡಿಕೊಳ್ಳಬಹುದು. ಆದರೆ ಆ ನೋವನ್ನು ಸಂಪೂರ್ಣ ಅರ್ಥಮಾಡಿಕೊಳ್ಳಲು ಆಗಲ್ಲ. ಆಟ ಈ ರೀತಿ ಕೊನೆಯಾಗಿದ್ದಕ್ಕೆ ತುಂಬಾ ನೋವಾಗಿದೆ. ನಮಗೆಲ್ಲ ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂಬುವುದನ್ನು ತಿಳಿಯಿರಿ. ಕೋಟ್ಯಂತರ ಜನರಿಗೆ ನೀವೇ ಚಾಂಪಿಯನ್, ನೀವೇ ಸ್ಫೂರ್ತಿ. ತಲೆ ಎತ್ತಿ ನಡೆಯಿರಿ’ ಎಂದು ಫರ್ಹಾನ್ ಅಖ್ತರ್ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿನೇಶ್ ಘೋಗಟ್ ಅವರು ಬಂಗಾರದ ಪದಕಕ್ಕಿಂತಲೂ ಹೆಚ್ಚಿನದ್ದು ಸಾಧಿಸಿದ್ದಾರೆ’ ಎಂದು ನಟಿ ತಾಪ್ಸಿ ಪನ್ನು ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಫಾತಿಮಾ ಸಹಾ ಶೇಖ್, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಫೋಗಟ್ ಸಾಧನೆ ಕೊಂಡಾಡಿದ್ದಾರೆ. ಇಡೀ ದೇಶವೇ ಇಂದು ವಿನೇಶ್ ಅವರ ಸಾಧನೆಯನ್ನು ಕಣ್ಣೀರಿನಿಂದ ಕೊಂಡಾಡಿದೆ ಎನ್ನುವುದು ಸುಳ್ಳಲ್ಲ.