ಮುಂಬೈ: 90ರ ದಶಕದಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್‌ರಂತಹ ಬಾಲಿವುಡ್ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡಿದ್ದ ನಟಿ ಮಮತಾ ಕುಲಕರ್ಣಿ ಈಗ ಸನ್ಯಾಸಿನಿಯಾಗಿ ಬದಲಾಗಿದ್ದಾರೆ. ಹಲವು ವರ್ಷಗಳಿಂದ ಕಣ್ಮರೆಯಾಗಿದ್ದ ಮಮತಾ ಅವರು ಈಗ ಪ್ರಯಾಗ್‌ರಾಜ್‌ನ ಮಹಾಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದು, ಈಗ ಅವರಿಗೆ ಕಿನ್ನಾರ್ ಅಖಾಡದ ಮಹಾಮಂಡಲೇಶ್ವರ್ ಆಗಿ ಬಡ್ತಿ ಸಿಕ್ಕಿದೆ.
ಈ ಕುರಿತು ಮಾಹಿತಿ ನೀಡಿರುವ ಕಿನ್ನಾರ್ ಅಖಾಡದ ಆಚಾರ್ಯ ಮಹಾಮಂಡಲೇಶ್ವರ್ ಲಕ್ಷ್ಮೀ ನಾರಾಯಣ್ ಅವರು, “ಮಮತಾ ಕುಲಕರ್ಣಿ ಅವರಿಗೆ ಮಹಾಮಂಡಲೇಶ್ವರ ಸ್ಥಾನ ನೀಡುವ ಪ್ರಕ್ರಿಯೆಗಳು ಜಾರಿಯಲ್ಲಿವೆ. ಅವರಿಗೆ ಈಗ ಆಧ್ಯಾತ್ಮಿಕ ಹೆಸರಾದ ಯಮಾಯಿ ಮಮತಾ ನಂದಗಿರಿ ಎಂದು ನಾಮಕರಣ ಮಾಡಲಾಗಿದೆ. ಕಿನ್ನಾರ ಅಖಾಡವು ಅವರನ್ನು ಮಹಾಮಂಡಲೇಶ್ವರರಾಗಿ ನೇಮಿಸುತ್ತಿದೆ” ಎಂದಿದ್ದಾರೆ.
ಜೊತೆಗೆ, ಕಳೆದ ಒಂದೂವರೆ ವರ್ಷದಿಂದ ಮಮತಾ ಅವರು ನಮ್ಮ ಅಖಾಡದೊಂದಿಗೆ ಗುರುತಿಸಿಕೊಂಡಿದ್ದಾರೆ. ಹಾಗಂತ ಅವರ ಕಲಾ ವೃತ್ತಿಗೆ ನಾವು ನಿರ್ಬಂಧ ಹೇರುವುದಿಲ್ಲ. ಯಾವುದಾದರೂ ಭಕ್ತಿ ಅಥವಾ ದೈವಿಕ ಪಾತ್ರವನ್ನು ಅವರು ಮಾಡುವುದಿದ್ದರೆ ಮಾಡಬಹುದು. ನಮ್ಮ ಅಖಾಡವು ಕಲೆಯನ್ನು ಗೌರವಿಸುತ್ತದೆ ಎಂದೂ ಲಕ್ಷ್ಮೀ ನಾರಾಯಣ್ ತಿಳಿಸಿದ್ದಾರೆ.

ಮಮತಾ ಅವರು ಕಾವಿ ತೊಟ್ಟು, ಕೊರಳಲ್ಲಿ ರುದ್ರಾಕ್ಷಿ ಮಾಲೆ ಹಾಕಿಕೊಂಡು ಪ್ರಯಾಗ್‌ರಾಜ್‌ನಲ್ಲಿ ಸಾಂಪ್ರದಾಯಿಕ ಪಿಂಡ ದಾನ ವಿಧಿಯನ್ನು ನೆರವೇರಿಸುತ್ತಿದ್ದ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅವರ ಜೊತೆಗೆ ಸಾಧುಗಳಾದ ಡಾ.ಲಕ್ಷ್ಮೀ ನಾರಾಯಣ ತ್ರಿಪಾಠಿ ಹಾಗೂ ಸ್ವಾಮಿ ಜೈ ಅಂಬಾನಂದ ಗಿರಿ ಅವರೂ ಇದ್ದಿದ್ದು ಕಂಡುಬಂದಿತ್ತು. ಈ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, “ಇದು ಮಹಾದೇವ ಮತ್ತು ಮಹಾಕಾಳಿಯ ಆಜ್ಞೆ. ಇದು ನನ್ನ ಗುರುಗಳ ಆದೇಶ. ಅವರು ಈ ದಿನವನ್ನು ಆಯ್ಕೆ ಮಾಡಿಕೊಂಡರು. ಇದರಲ್ಲಿ ನನ್ನದೇನೂ ಇಲ್ಲ” ಎಂದು ಮಮತಾ ಕುಲಕರ್ಣಿಯವರು ಹೇಳಿದ್ದರು.
ಕಿನ್ನಾರ್ ಅಖಾಡ ಎನ್ನುವುದು ತೃತೀಯ ಲಿಂಗಿ ಸಾಧುಗಳಿರುವ ಅಖಾಡವಾಗಿಜೆ. ಇದು ಪ್ರಾಚೀನ ಜುನಾ ಅಖಾಡದ ಭಾಗವೂ ಹೌದು. ಮಹಾಮಂಡಲೇಶ್ವರ ಸ್ಥಾನ ದೊರೆತ ಬಳಿಕ ಮಮತಾ ಕುಲಕರ್ಣಿ ಅವರು ಸನಾತನ ಧರ್ಮದ ಬೋಧನೆಗಳನ್ನು ಮಾಡುತ್ತಾ, ಸಮಾಜ ಸೇವೆಯಲ್ಲಿ ತೊಡಗಲಿದ್ದಾರೆ.
ಯಾರೀ ಮಮತಾ ಕುಲಕರ್ಣಿ?
1990ರ ದಶಕದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಖ್ಯಾತ ಬಾಲಿವುಡ್ ನಟಿ. ಹಲವು ವರ್ಷಗಳ ಕಾಲ ಯಾರ ಕಣ್ಣಿಗೂ ಬೀಳದೇ ಮರೆಯಾಗಿದ್ದ ಅವರು ಕಳೆದ ವರ್ಷವಷ್ಟೇ ಮುಂಬೈಗೆ ವಾಪಸಾಗಿದ್ದರು. ಕರಣ್ ಅರ್ಜುನ್, ಬಾಝಿ ಮುಂತಾದ ಸಿನಿಮಾಗಳ ಮೂಲಕ ಅವರು ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್ ಮುಂತಾದ ಪ್ರಮುಖ ನಟರ ಜತೆಗೂ ಮಮತಾ ತೆರೆ ಹಂಚಿಕೊಂಡಿದ್ದರು. ಮಮತಾ ವಿರುದ್ಧ 2,000 ಕೋಟಿ ರೂ. ಗಳ ಡ್ರಗ್ಸ್ ಪ್ರಕರಣ ದಾಖಲಾಗಿತ್ತು. ಕಳೆದ ವರ್ಷ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಅವರ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ಕೈಬಿಡುತ್ತಿರುವುದಾಗಿ ಬಾಂಬೆ ಹೈಕೋರ್ಟ್ ಘೋಷಿಸಿತ್ತು.