ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆದಿದೆ. ಅವರ ಮನೆಗೆ ಮಧ್ಯರಾತ್ರಿ ವೇಳೆ ನುಗ್ಗಿದ ದರೋಡೆಕೋರನೊಬ್ಬ ಸತತ ಆರು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಮುಂಬೈನ ಪಶ್ಚಿಮ ಬಾಂದ್ರಾದಲ್ಲಿರುವ ಅವರ ನಿವಾಸಕ್ಕೆ ಮಧ್ಯರಾತ್ರಿ 2.30ರ ಸುಮಾರಿಗೆ ನುಗ್ಗಿ ದುಷ್ಕರ್ಮಿ ಚಾಕುವಿನಿಂದ ಚುಚ್ಚಿದ್ದಾನೆ. ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವೇಳೆ ಮನೆಯಲ್ಲಿದ್ದವರು ಎಚ್ಚರಗೊಂಡ ನಂತರ ದರೋಡೆಕೋರ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ವಿವರಿಸಿದ್ದಾರೆ.
‘ಹಲ್ಲೆಗೊಳಗಾಗಿದ್ದ ಸೈಫ್ ಅಲಿ ಖಾನ್ ಅವರನ್ನು ಮುಂಜಾನೆ 3.30ಕ್ಕೆ ಆಸ್ಪತ್ರೆಗೆ ಕರೆತರಲಾಯಿತು. ಸೈಫ್ ಅವರಿಗೆ ೬ ಕಡೆ ಚಾಕುವಿನಿಂದ ಆಳವಾಗಿ ಇರಿಯಲಾಗಿದೆ. ಬೆನ್ನುಮೂಳೆ ಸೇರಿದಂತೆ ಆರು ಭಾಗಗಳಲ್ಲಿ ಗಾಯಗಳಾಗಿವೆ. ಸದ್ಯ ತಜ್ಞ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ’ ಎಂದು ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನೀರಜ್ ಉತ್ತಮನಿ ಹೇಳಿದ್ದಾರೆ.
ಕರೀನಾ ಕಪೂರ್ ಎಲ್ಲಿದ್ದರು?
ಚಾಕು ಇರಿತದ ಘಟನೆ ನಡೆಯುವ ವೇಳೆ ಕರಿನಾ ಕಪೂರ್ ಮನೆಯಲ್ಲಿ ಇರಲಿಲ್ಲವೇ ಎಂಬ ಪ್ರಶ್ನೆಗಳು ಹುಟ್ಟಿವೆ., ಅವರ ಸಹೋದರಿ ಕರಿಷ್ಮಾ ಕಪೂರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು ಅದರಲ್ಲಿ ಕರೀನಾ ಕಪೂರ್ ಬುಧವಾರ ರಾತ್ರಿ ‘ಗರ್ಲ್ಸ್ ನೈಟ್ ಔಟ್’ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಅದರಲ್ಲಿ , ವೀರ್ ದಿ ವೆಡ್ಡಿಂಗ್ ನಿರ್ಮಾಪಕಿ ರಿಯಾ ಕಪೂರ್ ಮತ್ತು ಅವರ ವೀರ್ ದಿ ವೆಡ್ಡಿಂಗ್ ಸಹನಟ ಸೋನಮ್ ಕಪೂರ್ ಇದ್ದರು.
ಆದರೆ, ದುಷ್ಕರ್ಮಿಯ ದಾಳಿಯ ಸಮಯದಲ್ಲಿ ಅವರು ಬಾಂದ್ರಾ ಮನೆಯಲ್ಲಿದ್ದರು. ಕರೀನಾ ಮತ್ತು ಮಕ್ಕಳಾದ ತೈಮೂರ್ ಮತ್ತು ಜೆಹ್ ಸೇರಿದಂತೆ ಕುಟುಂಬವು ಮನೆಯಲ್ಲಿತ್ತು ಎಂದು ನಟನ ಮೂಲಗಳು ತಿಳಿಸಿವೆ. ಸೈಫ್ ತನ್ನ ಕುಟುಂಬವನ್ನು ರಕ್ಷಿಸಲು ಹೋಗಿ ಚಾಕು ಇರಿತಕ್ಕೆ ಒಳಗಾಗಿದ್ದಾರೆ ಎಂದೂ ಹೇಳಿದ್ದಾರೆ.