ಮುಂಬೈ: ಬಾಲಿವುಡ್ ನಟ ಹಾಗೂ ಸ್ವಯಂ ಘೋಷಿತ ಚಲನಚಿತ್ರ ವಿಮರ್ಶಕ ಕಮಾಲ್ ಆರ್ ಖಾನ್ (ಕೆಆರ್‌ಕೆ) ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಂಧೇರಿ ಪ್ರದೇಶದ ವಸತಿ ಸಮುಚ್ಚಯವೊಂದರ ಮೇಲೆ ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ನಾಲ್ಕು ಸುತ್ತು ಗುಂಡು ಹಾರಿಸಿದ ಗಂಭೀರ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಜನವರಿ 18 ರಂದು ನಡೆದ ಈ ಘಟನೆಯಲ್ಲಿ, ಕೆಆರ್‌ಕೆ ಹಾರಿಸಿದ ಗುಂಡುಗಳು ಓಶಿವಾರ ಪ್ರದೇಶದ ವಸತಿ ಕಟ್ಟಡವೊಂದಕ್ಕೆ ತಗುಲಿವೆ. ವಿಶೇಷವೆಂದರೆ, ಇದೇ ಕಟ್ಟಡದಲ್ಲಿ ಬರಹಗಾರ ಮತ್ತು ನಿರ್ದೇಶಕ ನೀರಜ್ ಕುಮಾರ್ ಮಿಶ್ರಾ ವಾಸವಾಗಿದ್ದಾರೆ. ಮಿಶ್ರಾ ಅವರು ಎರಡನೇ ಮಹಡಿಯಲ್ಲಿ ವಾಸವಿದ್ದರೆ, ರೂಪದರ್ಶಿ ಪ್ರತೀಕ್ ಬೈದ್ ಅವರು ನಾಲ್ಕನೇ ಮಹಡಿಯಲ್ಲಿ ನೆಲೆಸಿದ್ದಾರೆ.
ಶುಕ್ರವಾರ ರಾತ್ರಿ ಕೆಆರ್‌ಕೆ ಅವರನ್ನು ಸ್ಟುಡಿಯೋದಿಂದ ವಶಕ್ಕೆ ಪಡೆದ ಪೊಲೀಸರು, ಸುದೀರ್ಘ ವಿಚಾರಣೆಯ ನಂತರ ಶನಿವಾರ ಅಧಿಕೃತವಾಗಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾದ ಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೆಆರ್‌ಕೆ ವಿಚಿತ್ರ ವಾದ:
ಪೊಲೀಸ್ ವಿಚಾರಣೆ ವೇಳೆ ಕೆಆರ್‌ಕೆ ವಿಚಿತ್ರವಾದ ಹೇಳಿಕೆಯೊಂದನ್ನು ನೀಡಿದ್ದಾರೆ. ತಾನು ಯಾರಿಗೂ ಹಾನಿ ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಹೇಳಿಕೊಂಡಿರುವ ಅವರು, “ನನ್ನ ಬಂದೂಕನ್ನು ಸ್ವಚ್ಛಗೊಳಿಸುತ್ತಿದ್ದೆ. ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರೀಕ್ಷಿಸಲು ಮನೆಯ ಮುಂಭಾಗದಲ್ಲಿರುವ ಮ್ಯಾಂಗ್ರೋವ್ (ಕಾಂಡ್ಲಾ) ಕಾಡಿನತ್ತ ಗುಂಡು ಹಾರಿಸಿದೆ. ಆದರೆ, ಬಲವಾದ ಗಾಳಿಯಿಂದಾಗಿ ಗುಂಡುಗಳು ದಿಕ್ಕು ಬದಲಿಸಿ ಕಟ್ಟಡಕ್ಕೆ ಹೋಗಿ ತಗುಲಿವೆ,” ಎಂದು ಸಮಜಾಯಿಷಿ ನೀಡಿದ್ದಾರೆ.
ಆರಂಭದಲ್ಲಿ ಗುಂಡು ಹಾರಿಸಿದ್ದು ಯಾರು ಎಂಬ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಇರಲಿಲ್ಲ. ಆದರೆ ತಾಂತ್ರಿಕ ತನಿಖೆ ಮತ್ತು ಸಾಕ್ಷ್ಯಾಧಾರಗಳ ಪರಿಶೀಲನೆಯ ನಂತರ ಕೆಆರ್‌ಕೆ ಅವರ ಕೈವಾಡವಿರುವುದು ದೃಢಪಟ್ಟಿದೆ. ಸದ್ಯ ಅವರು ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಟ್ರಂಪ್‌ಗೆ ಇರಾನ್ ಎಚ್ಚರಿಕೆ | “ಯಾವುದೇ ದಾಳಿ ನಡೆದರೂ ಪೂರ್ಣ ಪ್ರಮಾಣದ ಯುದ್ಧ ಎಂದೇ ಭಾವಿಸುತ್ತೇವೆ



















