ಹತ್ರಾಸ್ ಕಾಲ್ತುಳಿತ ದುರಂತಕ್ಕೆ ಇಡೀ ವಿಶ್ವವೇ ಮಮ್ಮಲ ಮರಗುತ್ತಿದೆ. ಆ ದುರಂತದ ಕೇಂದ್ರ ಬಿಂದು ಸ್ವಯಂ ಘೋಷಿತ ದೇವಮಾನವ ಸೂರಜ್ ಪಾಲ್ ಅಲಿಯಾಸ್ ನಾರಾಯಣ ಸಾಕಾರ್ ಹರಿ ಅಂದ್ರೆ ಭೋಲೆ ಬಾಬಾ ಎಂದೇ ಪ್ರಸಿದ್ಧವಾಗಿರುವ ಈ ವ್ಯಕ್ತಿ 23 ವರ್ಷಗಳ ಹಿಂದೆ ಮರು ಜೀವವನ್ನೇ ಕೊಡುತ್ತೇನೆಂದು ಹೇಳಿ, ಜೈಲು ಪಾಲಾಗಿದ್ದ.
23 ವರ್ಷಗಳ ಹಿಂದೆಯೇ ಆಗ್ರಾ ಪೊಲೀಸರು ಈತನನ್ನು ಬಂಧಿಸಿದ್ದರು ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ. ತನ್ನ ದತ್ತು ಮಗಳಿಗೆ ಮರು ಜೀವ ನೀಡಿ ಬದುಕಿಸುವ ಪವಾಡ ಶಕ್ತಿ ಇದೆ ಎಂದು ಹೇಳಿಕೊಂಡಿದ್ದಕ್ಕೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ವರದಿಯೊಂದು ಹೇಳಿದೆ.
2000ದಲ್ಲಿ ಭೋಲೆ ಬಾಬಾ ಆಗ್ರಾದಲ್ಲಿ ವಾಸವಿದ್ದ. ಆಗ ಸೂಜರ್ ಪಾಲ್ ವಿರುದ್ಧ ಔಷಧ ಮತ್ತು ಪವಾಡ ಚಿಕಿತ್ಸೆಗಳು ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಬಾಬಾಗೆ ಮಕ್ಕಳಿರಲಿಲ್ಲ. ಹೀಗಾಗಿ ಸಂಬಂಧಿಕರಲ್ಲಿಯೇ ಮಗುವನ್ನು ದತ್ತು ಪಡೆದುಕೊಂಡಿದ್ದರು. ದತ್ತು ಪುತ್ರಿಗೆ ಕ್ಯಾನ್ಸರ್ ಕಾಯಿಲೆ ಇತ್ತು. ಒಂದು ದಿನ ಆಕೆ ಅಸ್ವಸ್ಥಗೊಂಡು ಮೂರ್ಛೆ ಹೋಗಿದ್ದಳು. ಆದರೆ ಬಾಬಾ ಅವರ ಅನುಯಾಯಿಗಳು ಮೃತ ಬಾಲಕಿಯನ್ನು ಅವರು ತಮ್ಮ ಪವಾಡ ಶಕ್ತಿಯಿಂದ ಬದುಕಿಸುತ್ತಾರೆಂದು ಹೇಳಿದ್ದರು. ಅಷ್ಟರಲ್ಲಿ ಪುತ್ರಿಗೆ ಪ್ರಜ್ಞೆ ಬಂದಿತ್ತಾದರೂ ನಂತರದಲ್ಲಿ ಆಕೆ ಸಾವನ್ನಪ್ಪಿದ್ದಳು.

ಅಂತ್ಯ ಸಂಸ್ಕಾರಕ್ಕಾಗಿ ಆಕೆಯ ಶವವನ್ನು ಸ್ಮಶಾನಕ್ಕೆ ಸಾಗಿಸಲಾಗಿತ್ತು. ಆದರೆ ಅವರ ಅನುಯಾಯಿಗಳು, ನಮ್ಮ ಬಾಬಾ ಬಾಲಕಿಯನ್ನು ಬದುಕಿಸುತ್ತಾರೆ ಎಂದು ಹೇಳಿ ಅಂತ್ಯಕ್ರಿಯೆಗೆ ಅಡ್ಡಿಪಡಿಸಿ ಸಾಕಷ್ಟು ಗಲಾಟೆ ಮಾಡಿದ್ದರು. ಹೀಗಾಗಿ ಆ ವೇಳೆ ಈ ಘಟನೆ ಕುರಿತು ಪೊಲೀಸರು ಬಾಬಾ ಹಾಗೂ ಅವರ ಆರು ಸಹಚರರನ್ನು ಬಂಧಿಸಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಬಾಬಾ ಕಾನೂನಿನಿಂದ ತಪ್ಪಿಸಿಕೊಂಡಿದ್ದ.
ಸೂರಜ್ ಪಾಲ್ ನ ಆಗ್ರಾ ಮನೆಗೆ ಆತನ ಭಕ್ತರು ದರ್ಶನಕ್ಕಾಗಿ ನಿರಂತರವಾಗಿ ಆಗಮಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಕಸ್ಗಂಜ್‌ಗೆ ಸ್ಥಳಾಂತರ ಹೊಂದುವವರೆಗೂ ಈ ಮನೆಯೇ ಭೋಲೆ ಬಾಬಾರ ಆಶ್ರಮವಾಗಿ ಬದಲಾಗಿತ್ತು.
ಭೋಲೆ ಬಾಬಾಗೂ ರಾಜಸ್ಥಾನದಲ್ಲಿ ನಡೆದ ಜೂನಿಯರ್ ಎಂಜಿನಿಯರ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಕಿಂಗ್‌ಪಿನ್‌ಗೂ ನಂಟು ಇರುವುದು ಕೂಡ ಬೆಳಕಿಗೆ ಬಂದಿದೆ. ರಾಜಸ್ಥಾನದಲ್ಲಿ ಜೆಇಎನ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿಯಲ್ಲಿ ನೇಪಾಳದಲ್ಲಿ ಬಂಧಿತನಾಗಿದ್ದ ಪ್ರಮುಖ ಆರೋಪಿ ಹರ್ಷವರ್ಧನ್ ಮೀನಾಗೆ ಸೇರಿದ ಜಮೀನಿನಲ್ಲಿಯೇ ಭೋಲೆ ಬಾಬಾ ಆಶ್ರಮ ಇರುವುದು ಈಗ ಬಹಿರಂಗವಾಗಿದೆ. ಆದರೆ, ಜನರು ಮಾತ್ರ ಈ ಬಾಬಾನ ಪಾದದ ಧೂಳು ಸ್ಪರ್ಶಿಸಲು ಹೋಗಿ ಸಾವನ್ನಪ್ಪಿದ್ದು ದುರಂತವೇ ಸರಿ.
