ನವದೆಹಲಿ: ಇತ್ತೀಚೆಗಷ್ಟೇ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಶವವು ದೆಹಲಿಯ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿ ಮೃತದೇಹವನ್ನು ಕಲ್ಲಿಗೆ ಕಟ್ಟಿ ಕಾಲುವೆಗೆ ಎಸೆಯಲಾಗಿದೆ(Crime News) ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳನ್ನು ಈಶಾನ್ಯ ದೆಹಲಿಯ ಸೀಮಾಪುರಿಯ ಸುಂದರ್ ನಗರಿ ನಿವಾಸಿ ಕೋಮಲ್ ಎಂದು ಗುರುತಿಸಲಾಗಿದೆ. ಮಾರ್ಚ್ 12ರಿಂದ ಆಕೆ ನಾಪತ್ತೆಯಾಗಿದ್ದಳು. ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಈಗ ಶವ ಪತ್ತೆಯಾಗಿದ್ದು, ಶವವನ್ನು ಕಲ್ಲಿಗೆ ಕಟ್ಟಿ ಚಾವ್ಲಾ ಕಾಲುವೆಗೆ ಎಸೆಯಲಾಗಿತ್ತು ಎನ್ನಲಾಗಿದೆ.
ಕೋಮಲ್ ಹತ್ಯೆಯಲ್ಲಿ ಆಕೆಯ ಪರಿಚಯಸ್ಥನಾಗಿದ್ದ ಆಸಿಫ್ ಎಂಬಾತನ ಕೈವಾಡವಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಟ್ಯಾಕ್ಸಿ ಚಾಲಕರಾಗಿದ್ದ ಆಸಿಫ್, ಮಾರ್ಚ್ 12 ರಂದು ಸೀಮಾಪುರಿಯಿಂದ ಕಾರಿನಲ್ಲಿ ಕೋಮಲ್ ಅವರನ್ನು ಕರೆದುಕೊಂಡು ಹೋಗಿದ್ದ. ಆದರೆ ಈ ಪ್ರಯಾಣದ ವೇಳೆ ಇಬ್ಬರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಆಸಿಫ್, ಕೋಮಲ್ ಅವರನ್ನು ಕೊಲೆ ಮಾಡಿ, ಬಳಿಕ ಶವವನ್ನು ಕಲ್ಲಿಗೆ ಕಟ್ಟಿ ಚಾವ್ಲಾ ಕಾಲುವೆಗೆ ಎಸೆದಿದ್ದಾನೆ.
ಶವ ಪತ್ತೆಯಾದ ಬಳಿಕ ಕೊಲೆ ಪ್ರಕರಣ ದಾಖಲು
ಮಾರ್ಚ್ 12ರಿಂದ ಕೋಮಲ್ ನಾಪತ್ತೆಯಾಗಿದ್ದ ಕಾರಣ, ಆಕೆಯ ಕುಟುಂಬ ಸದಸ್ಯರು ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಕೆಯನ್ನು ಅಪಹರಣ ಮಾಡಲಾಗಿದೆ ಎಂದೇ ಪ್ರಕರಣ ದಾಖಲಿಸಲಾಗಿತ್ತು. ಮಾರ್ಚ್ 17ರಂದು ಶವವು ಕಾಲುವೆಯಲ್ಲಿ ತೇಲಲು ಆರಂಭಿಸಿದ್ದು, ಇದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಸಿಫ್ ಬಂಧನ
ಕೋಮಲ್ ಕುಟುಂಬ ಸದಸ್ಯರು ನೀಡಿದ ದೂರಿನ ಅನ್ವಯ ಆಸಿಫ್ ನನ್ನು ಪೊಲೀಸರು ಬಂಧಿಸಿದ್ದು, ಅಪರಾಧಕ್ಕೆ ಬಳಸಿದ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಲೆ ಪ್ರಕರಣದಲ್ಲಿ ಬೇರೆಯವರ ಕೈವಾಡವಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.