ಕೊಲೊರಾಡೋ : ಮಾನವೀಯತೆಯನ್ನೇ ನಾಚಿಸುವಂತಹ ಘೋರ ಕೃತ್ಯವೊಂದು ಅಮೆರಿಕದ ಕೊಲೊರಾಡೋದಲ್ಲಿ ಬಯಲಾಗಿದ್ದು, ನೂರಾರು ಕುಟುಂಬಗಳ ನಂಬಿಕೆಯನ್ನು ಹೂತುಹಾಕಲಾಗಿದೆ. ‘ಗ್ರೀನ್ ಬರಿಯಲ್’ (ಪರಿಸರ ಸ್ನೇಹಿ ಅಂತ್ಯಸಂಸ್ಕಾರ) ಮತ್ತು ದಹನ ಪ್ರಕ್ರಿಯೆಯ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದ ‘ರಿಟರ್ನ್ ಟು ನೇಚರ್’ ಫ್ಯೂನರಲ್ ಹೋಮ್‌ನ ಮಾಲೀಕ ಜಾನ್ ಹಾಲ್‌ಫೋರ್ಡ್ ಮತ್ತು ಅವರ ಪತ್ನಿ ಕ್ಯಾರಿ ಹಾಲ್‌ಫೋರ್ಡ್ ಅವರ ಕ್ರೌರ್ಯ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಶವಗಳನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವ ಬದಲು, ಅವುಗಳನ್ನು ಕೊಳೆಯಲು ಬಿಟ್ಟು ಕುಟುಂಬಸ್ಥರಿಗೆ ನಕಲಿ ಬೂದಿಯನ್ನು ನೀಡುತ್ತಿದ್ದ ಕರಾಳ ದಂಧೆ ಈಗ ಬಯಲಾಗಿದೆ.
ಕೊಳೆಯುತ್ತಿರುವ 189 ಶವಗಳು: ಒಂದರ ಮೇಲೆ ಒಂದು ರಾಶಿ!
ಪೆನ್ರೋಸ್‌ನಲ್ಲಿರುವ ಈ ಫ್ಯೂನರಲ್ ಹೋಮ್‌ನ ಕಟ್ಟಡದ ಮೇಲೆ ದಾಳಿ ನಡೆಸಿದ ಪೊಲೀಸರು ಮತ್ತು ಎಫ್‌ಬಿಐ ಅಧಿಕಾರಿಗಳು ಅಲ್ಲಿನ ದೃಶ್ಯ ಕಂಡು ಹೌಹಾರಿದ್ದಾರೆ. ಯಾವುದೇ ಶೈತ್ಯೀಕರಣ ವ್ಯವಸ್ಥೆ ಇಲ್ಲದ ಕೊಠಡಿಗಳಲ್ಲಿ ಬರೋಬ್ಬರಿ 189 ಶವಗಳನ್ನು ಒಂದರ ಮೇಲೆ ಒಂದರಂತೆ ಪೇರಿಸಿಡಲಾಗಿತ್ತು. ಕೆಲವು ಶವಗಳು 2019 ರಿಂದಲೂ ಅಲ್ಲೇ ಇದ್ದು, ಸಂಪೂರ್ಣವಾಗಿ ಕೊಳೆತು ಹೋಗಿದ್ದವು. ಇಡೀ ಕಟ್ಟಡದಲ್ಲಿ ನೊಣಗಳು, ಹುಳುಗಳು ಹರಡಿಕೊಂಡಿದ್ದು, ದುರ್ವಾಸನೆ ತಾಳಲಾರದೆ ಸ್ಥಳೀಯರು ದೂರು ನೀಡಿದಾಗ ಈ ಘೋರ ಸತ್ಯ ಹೊರಬಂದಿದೆ.
ಪ್ರೀತಿಪಾತ್ರರ ಬೂದಿ ಬದಲು ಸಿಮೆಂಟ್ ಪುಡಿ!
ತಮ್ಮ ಕುಟುಂಬದವರು ಅಥವಾ ಸ್ನೇಹಿತರು ಮೃತಪಟ್ಟಾಗ ಅವರ ಅಂತ್ಯಸಂಸ್ಕಾರಕ್ಕಾಗಿ ಈ ದಂಪತಿಯನ್ನು ನಂಬಿದ್ದ ನೂರಾರು ಜನರಿಗೆ ಇವರು ಮಾಡಿರುವ ವಂಚನೆ ಅಕ್ಷಮ್ಯ. ಶವಗಳನ್ನು ಸುಡುವ ಬದಲು ಅವುಗಳನ್ನು ಕಟ್ಟಡದಲ್ಲಿ ಎಸೆದು, ಕುಟುಂಬದವರಿಗೆ ಬೂದಿ ಎಂದು ಡ್ರೈ ಕಾಂಕ್ರೀಟ್ (ಒಣ ಸಿಮೆಂಟ್ ಪುಡಿ) ನೀಡುತ್ತಿದ್ದರು. ಅನೇಕ ಕುಟುಂಬಗಳು ಈ ನಕಲಿ ಬೂದಿಯನ್ನು ತಮ್ಮ ಪ್ರೀತಿಪಾತ್ರರ ಅವಶೇಷಗಳೆಂದು ಭಾವಿಸಿ ಸಮುದ್ರಕ್ಕೆ ಅರ್ಪಿಸಿದ್ದಾರೆ ಅಥವಾ ಮನೆಯಲ್ಲಿ ಸಂರಕ್ಷಿಸಿಟ್ಟಿದ್ದಾರೆ. ಈಗ ತಮ್ಮ ಪ್ರೀತಿಪಾತ್ರರ ಶವಗಳು ಅನಾಥವಾಗಿ ಕೊಳೆಯುತ್ತಿದ್ದವು ಎಂಬ ವಿಷಯ ತಿಳಿದು ಆ ಕುಟುಂಬಗಳು ಆಘಾತಕ್ಕೆ ಒಳಗಾಗಿವೆ.
ಜನರ ಹಣದಲ್ಲಿ ಐಷಾರಾಮಿ ಜೀವನ
ಈ ದಂಪತಿ ಕೇವಲ ಸತ್ತವರ ಶವಕ್ಕೆ ಅವಮಾನ ಮಾಡಿದ್ದಷ್ಟೇ ಅಲ್ಲದೆ, ಹಣಕಾಸಿನ ವಿಚಾರದಲ್ಲೂ ಭಾರೀ ವಂಚನೆ ಮಾಡಿದ್ದಾರೆ. ಶವಸಂಸ್ಕಾರಕ್ಕಾಗಿ ಗ್ರಾಹಕರಿಂದ ಪಡೆದ ಸುಮಾರು 1.30 ಲಕ್ಷ ಡಾಲರ್ ಹಣವನ್ನು ಮತ್ತು ಕೋವಿಡ್-19 ಸಾಂಕ್ರಾಮಿಕ ಕಾಲದಲ್ಲಿ ಸರ್ಕಾರ ಸಣ್ಣ ಉದ್ದಿಮೆದಾರರಿಗೆ ನೀಡಿದ್ದ 9 ಲಕ್ಷ ಡಾಲರ್‌ನಷ್ಟು ಪರಿಹಾರ ಧನವನ್ನು ತಮ್ಮ ವೈಯಕ್ತಿಕ ಐಷಾರಾಮಿ ಜೀವನಕ್ಕಾಗಿ ಬಳಸಿಕೊಂಡಿದ್ದಾರೆ. ಈ ಹಣದಲ್ಲಿ ದುಬಾರಿ ಕಾರುಗಳು, ಟಿಫಾನಿ ಜ್ಯುವೆಲ್ಲರಿ ಖರೀದಿಸಿದ್ದಲ್ಲದೆ, ಲೇಸರ್ ಬಾಡಿ ಸ್ಕಲ್ಪ್ಟಿಂಗ್ ಚಿಕಿತ್ಸೆಗೆ ಹಣ ವ್ಯಯಿಸಿದ್ದಾರೆ.
ಜಾನ್ ಹಾಲ್‌ಫೋರ್ಡ್‌ಗೆ 40 ವರ್ಷಗಳ ಜೈಲು ಶಿಕ್ಷೆ
ಈ ಅಮಾನುಷ ಕೃತ್ಯಗಳಿಗಾಗಿ ಜಾನ್ ಹಾಲ್‌ಫೋರ್ಡ್‌ಗೆ ಇತ್ತೀಚೆಗೆ ನ್ಯಾಯಾಲಯವು 40 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಆತನ ಪತ್ನಿ ಕ್ಯಾರಿ ಹಾಲ್‌ಫೋರ್ಡ್ ಅವರ ಶಿಕ್ಷೆಯ ಪ್ರಮಾಣ ಏಪ್ರಿಲ್‌ನಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ. ಸುಮಾರು 191 ಶವಗಳ ದುರುಪಯೋಗ, ವಂಚನೆ ಮತ್ತು ಫೋರ್ಜರಿ ಪ್ರಕರಣಗಳು ಇವರ ಮೇಲೆ ದಾಖಲಾಗಿದ್ದವು. ಇದು ಕೇವಲ ಹಣದ ವಂಚನೆಯಲ್ಲ, ಬದಲಿಗೆ ಸಾವಿನ ನಂತರವೂ ಮಾನವ ದೇಹಕ್ಕೆ ನೀಡಬೇಕಾದ ಕನಿಷ್ಠ ಗೌರವವನ್ನು ಮಣ್ಣುಪಾಲು ಮಾಡಿದ ಜಗತ್ತಿನ ಅತಿ ದೊಡ್ಡ ‘ಫ್ಯೂನರಲ್ ಹೋಮ್’ ಹಗರಣಗಳಲ್ಲಿ ಒಂದು ಎಂಬ ಕುಖ್ಯಾತಿಗೆ ಕಾರಣವಾಗಿದೆ.
ಇದನ್ನೂ ಓದಿ : ಕೋಲಾರ | ಐದು ದಿನದ ಮಗುವನ್ನು 2 ಲಕ್ಷಕ್ಕೆ ಮಾರಿದ ದಂಪತಿ!



















