ಬೆಂಗಳೂರು : ಬಿಎಂಟಿಸಿ ನಿರ್ವಾಹಕರು ಯುಪಿಐ ಸ್ಕ್ಯಾನರ್ ದುರ್ಬಳಕೆ ಮಾಡಿಕೊಂಡು ಪ್ರಯಾಣಿಕರಿಂದ ಟಿಕೆಟ್ ಮೊತ್ತವನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸಿಕೊಂಡಿರುವ ಅಕ್ರಮವು ಬೆಳಕಿಗೆ ಬಂದಿದ್ದು, ಈ ಹಿನ್ನಲೆಯಲ್ಲಿ ಮೂವರು ಕಂಡಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ.

ಡಿಸೆಂಬರ್ ತಿಂಗಳಲ್ಲಿ ನಡೆದ ಆಂತರಿಕ ತನಿಖೆಯಲ್ಲಿ ಈ ದುರ್ಬಳಕೆ ಪ್ರಕರಣ ಪತ್ತೆಯಾಗಿದ್ದು, ಇದರ ಆಧಾರದ ಮೇಲೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಅಮಾನತು ಆದೇಶ ಹೊರಡಿಸಿದ್ದಾರೆ. ಸಾರಿಗೆ ಸಚಿವರ ಸೂಚನೆಯ ಮೇರೆಗೆ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಡಿಪೋ 23ಕ್ಕೆ ಸೇರಿದ ನಿರ್ವಾಹಕ ಸುರೇಶ್, ಪ್ರಯಾಣಿಕರಿಂದ ಒಟ್ಟು 47,257 ರೂ ಮೊತ್ತವನ್ನು ತಮ್ಮ ವೈಯಕ್ತಿಕ ಯುಪಿಐ ಖಾತೆಗೆ ವರ್ಗಾಯಿಸಿಕೊಂಡಿದ್ದು, ಡಿಪೋ 3ರ ನಿರ್ವಾಹಕ ಮಂಚೇಗೌಡ 54,358ರೂ ಹಾಗೂ ಡಿಪೋ 14ಕ್ಕೆ ಸೇರಿದ ನಿರ್ವಾಹಕ ಅಶ್ವಾಕ್ ಖಾನ್ 3,206ರೂ ಮೊತ್ತವನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಮೂವರು ನಿರ್ವಾಹಕರಿಂದ ಬಿಎಂಟಿಸಿ ಸಂಸ್ಥೆಗೆ ಒಟ್ಟು ಸುಮಾರು ಒಂದು ಲಕ್ಷ ನಾಲ್ಕು ಸಾವಿರ ರೂ ವಂಚನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಯಲಾಗುತ್ತಿದ್ದಂತೆ, ತಕ್ಷಣವೇ ಅಮಾನತು ಮಾಡಲು ಸಾರಿಗೆ ಸಚಿವರು ಸೂಚನೆ ನೀಡಿದ್ದು, ಅದರಂತೆ ಬಿಎಂಟಿಸಿ ಎಂಡಿ ಕ್ರಮ ಕೈಗೊಂಡಿದ್ದಾರೆ. ಮುಂದಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ‘ಕನ್ನಡ ಸಂಸ್ಕೃತಿ’ ಇಲಾಖೆಯಿಂದಲೇ ಕನ್ನಡ ಕಗ್ಗೊಲೆ | ಸಿಬ್ಬಂದಿಯಿಂದ ‘900’ ತಪ್ಪು.. ಎಡವಟ್ಟು ದುಪ್ಪಟ್ಟು!



















