ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ತನ್ನ ವೇಗದ ಜೀವನಶೈಲಿಯಿಂದ ಹೆಸರುವಾಸಿಯಾಗಿದೆ. ಆದರೆ, ಇಲ್ಲಿ ಪುಂಡರ ಹಾವಳಿಗೆ ಬ್ರೇಕ್ ಬೀಳುತ್ತಿಲ್ಲ. ದಿನೇ ದಿನೇ ಪುಡಿರೌಡಿಗಳು ಸದ್ದು ಮಾಡುತ್ತಲೇ ಇದ್ದಾರೆ. ಇದೀಗ ಪುಂಡರು ಬಿಎಂಟಿಸಿ ಬಸ್ ಡ್ರೈವರ್, ಕಂಡಕ್ಟರ್‌ಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಚಿಕ್ಕಗೊಲ್ಲರಹಟ್ಟಿ ಬಳಿ ನಡೆದಿದೆ. ಸದ್ಯ ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಿನ್ನೆ ಕೂಡ ಚಿಕ್ಕಗೊಲ್ಲರಹಟ್ಟಿ ಬಳಿ ಬಿಎಂಟಿಸಿ ಬಸ್ ಸಂಚರಿಸುವಾಗ ಕಾಚೋಹಳ್ಳಿಯಿಂದ ಹಿಂಬಾಲಿಸಿಕೊಂಡು ಬಂದ ಬೈಕ್ ಸವಾರರು ಬಸ್ ಅಡ್ಡಗಟ್ಟಿ ಚಾಲಕ ಮತ್ತು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಬಸ್ ಪಕ್ಕದಲ್ಲಿ ಬೈಕ್ ಹೋಗುತ್ತಿರುವುದಕ್ಕೆ ಚಾಲಕ ಹಾರ್ನ್ ಮಾಡಿದ್ದಾರೆ. ಇದನ್ನು ತಪ್ಪಾಗಿ ಅರ್ಥಮಾಡಿಕೊಂಡ ಬೈಕ್ ಸವಾರರು ಗಲಾಟೆ ಮಾಡಿದ್ದಾರೆ. ಬಸ್ ಅನ್ನು ಹಿಂಬಾಲಿಸಿಕೊಂಡು ಬಂದ ಬೈಕ್ ಸವಾರರು ಬಸ್ ನಿಲ್ಲಿಸಿ, ಚಾಲಕ ಮತ್ತು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಬಸ್ ಒಳಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಮಾರು ಅರ್ಧ ಗಂಟೆಯವರೆಗೆ ಬಸ್ ಅನ್ನು ನಿಲ್ಲಿಸಿಕೊಂಡು ಅಟ್ಟಹಾಸ ನಡೆದಿದ್ದಾರೆ.
ಪುಂಡರ ಹಲ್ಲೆಯಿಂದ ಚಾಲಕ ಮತ್ತು ಕಂಡಕ್ಟರ್‌ಗೆ ರಕ್ತಸಿಕ್ತ ಗಾಯಗಳಾಗಿದ್ದು, ಈ ವೇಳೆ ಪ್ರಯಾಣಿಕರು ಕೂಡ ಭಯಭೀತರಾಗಿ ಕಿರುಚಾಡಿದ್ದಾರೆ. ಬಳಿಕ ಬ್ಯಾಡರಹಳ್ಳಿ ಪೊಲೀಸ್ ಇಲಾಖೆಗೆ ಪ್ರಯಾಣಿಕರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕ ಮತ್ತು ಕಂಡಕ್ಟರ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.