ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿ 7:30ರ ಸುಮಾರಿಗೆ ಟಿನ್ ಫ್ಯಾಕ್ಟರಿ ಬಳಿ ಮದ್ಯದ ಅಮಲಿನಲ್ಲಿ BMTC ಬಸ್ ಚಲಾಯಿಸುತ್ತಿದ್ದ ಚಾಲಕನೊಬ್ಬ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
KA 57 F 3660 ನೋಂದಣಿ ಸಂಖ್ಯೆಯ ಬಿಎಂಟಿಸಿ ಬಸ್ ಚಾಲಕ ಪೂರ್ಣ ಪ್ರಮಾಣದಲ್ಲಿ ಮದ್ಯ ಸೇವಿಸಿ ಬಸ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಸ್ ಚಲಾಯಿಸುತ್ತಿದ್ದುದನ್ನು ಕಂಡು ಪ್ರಯಾಣಿಕರು ಭೀತಿಗೊಳಗಾಗಿದ್ದರು.
ಚಾಲಕನ ವರ್ತನೆಯಿಂದ ಗಾಬರಿಗೊಂಡ ಮಹಿಳೆಯೊಬ್ಬರು ಬಸ್ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಬಸ್ ನಿಲ್ಲಿಸದ ಚಾಲಕ, ಮಹಿಳೆಯ ಜೊತೆ ಉದ್ಧಟತನದಿಂದ ವಾಗ್ವಾದಕ್ಕಿಳಿದಿದ್ದಾನೆ.
ಚಾಲಕನ ಅಸಭ್ಯ ವರ್ತನೆ ಮತ್ತು ಆತ ಮದ್ಯ ಸೇವಿಸಿರುವುದನ್ನು ಖಚಿತಪಡಿಸಿಕೊಳ್ಳಲು ಮಹಿಳೆ ತನ್ನ ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಮಂತ್ರಾಲಯದಲ್ಲಿ ಯುಗಾದಿ ಹಬ್ಬದ ಸಂಭ್ರಮ.. ರಾಯರ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ!



















