ಮುಂಬೈ: ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳ ಚುನಾವಣಾ ಮತ ಎಣಿಕೆ ಭರದಿಂದ ಸಾಗಿದ್ದು, ದೇಶದ ಅತ್ಯಂತ ಶ್ರೀಮಂತ ಪಾಲಿಕೆ ಎಂದೇ ಖ್ಯಾತವಾಗಿರುವ ಬೃಹನ್ ಮುಂಬೈ ಮಹಾನಗರ ಪಾಲಿಕೆಯಲ್ಲಿ (ಬಿಎಂಸಿ) ಬಿಜೆಪಿ ನೇತೃತ್ವದ ಮೈತ್ರಿಕೂಟ ಭರ್ಜರಿ ಮುನ್ನಡೆ ಸಾಧಿಸಿದೆ. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಶಿವಸೇನೆಯ ಭದ್ರಕೋಟೆಯಲ್ಲೇ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಹಿನ್ನಡೆ ಅನುಭವಿಸುತ್ತಿದ್ದಾರೆ.
ಗುರುವಾರ ನಡೆದ ಮತದಾನದ ಎಣಿಕೆ ಪ್ರಕ್ರಿಯೆ ಇಂದು ನಡೆಯುತ್ತಿದ್ದು, ಮುಂಬೈ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಬಿಜೆಪಿ ಅಲೆ ಕಂಡುಬರುತ್ತಿದೆ.
ಬಿಎಂಸಿ ಕಣ ಹೇಗಿದೆ?
ಬಿಜೆಪಿ ಮೈತ್ರಿಕೂಟವು ಬಿಎಂಸಿಯ 86 ವಾರ್ಡ್ಗಳಲ್ಲಿ ಮುನ್ನಡೆ ಸಾಧಿಸಿದೆ. ಇದರಲ್ಲಿ ಬಿಜೆಪಿ 66 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದ್ದರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 20 ಕಡೆ ಮುನ್ನಡೆ ಕಾಯ್ದುಕೊಂಡಿದೆ. ಮತ್ತೊಂದೆಡೆ, ದಶಕಗಳಿಂದ ಪಾಲಿಕೆಯನ್ನು ನಿಯಂತ್ರಿಸುತ್ತಿದ್ದ ಠಾಕ್ರೆ ಕುಟುಂಬಕ್ಕೆ ಈ ಬಾರಿ ಮತದಾರರು ಶಾಕ್ ನೀಡಿದ್ದಾರೆ. ಠಾಕ್ರೆ ಸಹೋದರರ ನೇತೃತ್ವದ ಪಕ್ಷಗಳು ಒಟ್ಟು 58 ವಾರ್ಡ್ಗಳಲ್ಲಿ ಮಾತ್ರ ಮುನ್ನಡೆಯಲಿವೆ. ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) 53 ಕಡೆ ಮತ್ತು ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಕೇವಲ 5 ವಾರ್ಡ್ಗಳಲ್ಲಿ ಮುನ್ನಡೆ ಸಾಧಿಸಿವೆ.
ಸುಮಾರು 74,400 ಕೋಟಿ ರೂ. ವಾರ್ಷಿಕ ಬಜೆಟ್ ಹೊಂದಿರುವ ಬಿಎಂಸಿಗೆ 9 ವರ್ಷಗಳ ನಂತರ ಮತ್ತು 4 ವರ್ಷಗಳ ವಿಳಂಬದ ಬಳಿಕ ಚುನಾವಣೆ ನಡೆದಿದೆ ಎಂಬುದು ಗಮನಾರ್ಹ.
ರಾಜ್ಯಾದ್ಯಂತ ಬಿಜೆಪಿ ಮೇಲುಗೈ
ಮಹಾರಾಷ್ಟ್ರದಾದ್ಯಂತ ಒಟ್ಟು 29 ಮಹಾನಗರ ಪಾಲಿಕೆಗಳ ಒಟ್ಟಾರೆ ಚಿತ್ರಣವನ್ನು ಗಮನಿಸಿದರೆ ಬಿಜೆಪಿ 535 ವಾರ್ಡ್ಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸಿಂಹಪಾಲನ್ನು ಪಡೆದಿದೆ. ಮಿತ್ರಪಕ್ಷವಾಗಿರುವ ಶಿಂಧೆ ಬಣದ ಶಿವಸೇನೆ 164 ವಾರ್ಡ್ಗಳಲ್ಲಿ ಮುಂದಿದೆ.
ಕಾಂಗ್ರೆಸ್ ಪಕ್ಷವು ನಾಗ್ಪುರ, ಕೊಲ್ಲಾಪುರ ಮತ್ತು ಸೊಲ್ಲಾಪುರದಲ್ಲಿ ಚೇತರಿಕೆ ಕಂಡಿದ್ದು, ಒಟ್ಟು 147 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಮೂರನೇ ಸ್ಥಾನದಲ್ಲಿದೆ. ಉದ್ಧವ್ ಬಣದ ಶಿವಸೇನೆ 78 ಮತ್ತು ಅಜಿತ್ ಪವಾರ್ ಅವರ ಎನ್ಸಿಪಿ 70 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.
ಪುಣೆಯಲ್ಲಿ ಪವಾರ್ ಕುಟುಂಬಕ್ಕೆ ಆಘಾತ
ಪುಣೆ ಮಹಾನಗರ ಪಾಲಿಕೆ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಇಲ್ಲಿ ಅಜಿತ್ ಪವಾರ್ ಮತ್ತು ಶರದ್ ಪವಾರ್ ಬಣಗಳು ಒಂದಾಗಿ ಮೈತ್ರಿ ಮಾಡಿಕೊಂಡಿದ್ದವು. ಆದರೂ ಪುಣೆಯಲ್ಲಿ ಕೇಸರಿ ಪಡೆ ಆರ್ಭಟಿಸಿದ್ದು, ಬಿಜೆಪಿ 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಎನ್ಸಿಪಿ ಮೈತ್ರಿಕೂಟ ಕೇವಲ 6 ಸ್ಥಾನಗಳಲ್ಲಿ (ಅಜಿತ್ ಪವಾರ್ ಬಣ 6, ಶರದ್ ಪವಾರ್ ಬಣ 0) ಮುನ್ನಡೆ ಸಾಧಿಸಿ ಹೀನಾಯ ಸ್ಥಿತಿಯಲ್ಲಿದೆ.
ರಾಜ್ಯದ 29 ಪಾಲಿಕೆಗಳ 2,869 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 3.48 ಕೋಟಿ ಮತದಾರರು ಹಕ್ಕು ಚಲಾಯಿಸಿದ್ದರು. 2017ರ ಚುನಾವಣೆಯಲ್ಲಿ ಅವಿಭಜಿತ ಶಿವಸೇನೆ ಬಿಎಂಸಿಯಲ್ಲಿ ಅಧಿಕಾರ ಹಿಡಿದಿತ್ತು. ಛತ್ರಪತಿ ಸಂಭಾಜಿನಗರ, ನವಿ ಮುಂಬೈ, ಥಾಣೆ, ನಾಸಿಕ್, ನಾಗ್ಪುರ ಸೇರಿದಂತೆ ಪ್ರಮುಖ ನಗರಗಳಲ್ಲೂ ಮತ ಎಣಿಕೆ ಮುಂದುವರಿದಿದೆ.
ಇದನ್ನೂ ಓದಿ: ರೈತನಿಗೆ ಜಾತಿ ನಿಂದನೆ ಆರೋಪ | ಹರಿಹರ ಶಾಸಕ ಬಿ.ಪಿ.ಹರೀಶ್ ವಿರುದ್ಧ FIR



















