ವಿಜಯಪುರ : ಆ.19 ರೊಳಗಾಗಿ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ರಕ್ತ ಕ್ರಾಂತಿ ಆಗುತ್ತದೆ ಎಂದು ಸಂಸದ ಗೋವೀಂದ ಕಾರಜೋಳ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರಜೋಳ, ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಕಾರ್ಜುನ ಖರ್ಗೆ ಅವರು ಯಾಕೆ ಒಳ ಮೀಸಲಾತಿ ಒಪ್ಪುತ್ತಿಲ್ಲ? ಎಂದು ಪ್ರಶ್ನಿಸಿದ್ದಲ್ಲದೇ, ಆ.19ರೊಳಗಾಗಿ ಒಳಮೀಸಲಾತಿ ಜಾರಿ ಮಾಡದಿದ್ದರೆ ಕಾಂಗ್ರೆಸ್ ನಾಯಕರನ್ನು ರಸ್ತೆಗೆ ಕಾಲಿಡದಂತೆ ಮಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನುಡಿದಂತೆ ನಡೆದ ಸರ್ಕಾರ ಎಂದು ಬಾಯ್ಮಾತಿಗೆ ಹೇಳಿಕೊಂಡರೆ ಸಾಲದು, ಒಳಮೀಸಲಾತಿ ಜಾರಿ ಮಾಡಬೇಕು. ಮೀಸಲಾತಿ ಜಾರಿಗೆ ಯಾಕೆ ಸರ್ಕಾರ ಹಿಂದೇಟು ಹಾಕುತ್ತಿದೆ ? ಒಳ ಮೀಸಲಾತಿ ವಿಚಾರವಾಗಿ 2004 ರಲ್ಲಿ ಸದಾಶಿವ ಆಯೋಗ ನೇಮಕ ಮಾಡಲಾಗಿತ್ತು. ಆದರೆ ಅಂದಿನ ಎಸ್ ಎಂ ಕೃಷ್ಣ ನೇತೃತ್ವದ ಸರ್ಕಾರ ಅನುದಾನ ನೀಡಿರಲಿಲ್ಲ. ನಂತರ ಯಡಿಯೂರಪ್ಪ ನೇತೃತ್ವದ ಸರ್ಕಾರ 13 ಕೋಟಿ ರೂ. ಬಿಡುಗಡೆ ಮಾಡಿದ ಬಳಿಕ ಗಣತಿ ಆರಂಭವಾಯಿತು. ನಮ್ಮ ಅವಧಿಯಲ್ಲಿ ಸದಾಶಿವ ಆಯೋಗ ವರದಿ ಜಾರಿ ಮಾಡಲು ನಮಗೆ ಬಹುಮತವಿಲ್ಲದ ಕಾರಣ ಮೀಸಲಾತಿಯನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ ಎಂದಿದ್ದಾರೆ.
2013ರಲ್ಲಿ ಕಾಂಗ್ರೆಸ್ ಪಕ್ಷ ಮೀಸಲಾತಿ ನೀಡುವುದಾಗಿ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದ ಬಳಿಕ ಎಸ್ ಸಿ ಸಮುದಾಯದ ನಡುವೆ ವೈಷಮ್ಯ ಮೂಡುವಂತೆ ಮಾಡಿದೆ. ಕಾಂಗ್ರೆಸ್ ಸರ್ಕಾರ ಜನರನ್ನು ನಮ್ಮ ವಿರುದ್ಧ ಎತ್ತಿಕಟ್ಟಿ, ಸುಳ್ಳು ಪ್ರಚಾರ ಮಾಡಿ, ಯಡಿಯೂರಪ್ಪ ಅವರ ಮನೆಗೆ ಕಲ್ಲು ಹೊಡೆಸಿದ್ದಾರೆ. ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ ನಂತರ ಸುಪ್ರೀಂಕೋರ್ಟ್ ಆದೇಶದಂತೆ ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡಲಾಗಿದೆ. ದೇಶದ ಹಲವು ಕಡೆ ಒಳ ಮೀಸಲಾತಿಯನ್ನು ಜಾರಿ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ನಾಗಮೋಹನ್ ದಾಸ ವರದಿಯನ್ನು ಯಾಕೆ ಜಾರಿ ಮಾಡುತ್ತಿಲ್ಲ ? ನಾಗಮೋಹನ ದಾಸ್ ಆಯೋಗದ ವರದಿಯನ್ನು ತಿದ್ದುಪಡಿ ಮಾಡಿದರೂ ನಮಗೆ ಅಭ್ಯಂತರವಿಲ್ಲ. ಸರ್ಕಾರ ಜನಪರ ಇಲ್ಲ. ದಲಿತರು ವೈಷಮ್ಯದಲ್ಲಿ ಮುಳುಗಿರಲಿ ಎಂದು ಕಾಂಗ್ರೆಸ್ ಸರ್ಕಾರ ನಾಟಕವಾಡುತ್ತಿದೆ ಎಂದಿದ್ದಾರೆ.



















