ಬೆಳಗಾವಿ : ಅಸಲಿ ಪತ್ರಕರ್ತರ ಸೋಗಿನಲ್ಲಿ ಸರ್ಕಾರಿ ಮಹಿಳಾ ಅಧಿಕಾರಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗ್ ಅನ್ನು ಬೆಳಗಾವಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳಾ ಅಧಿಕಾರಿಯ ಮನೆಯ ಕೊಠಡಿಯಲ್ಲಿ ರಹಸ್ಯ (ಹಿಡನ್) ಕ್ಯಾಮರಾ ಅಳವಡಿಸಿ, ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ ಆ ವಿಡಿಯೋಗಳನ್ನು ಆಧಾರವಾಗಿ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದ ಮೂವರು ಆರೋಪಿಗಳನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಮೀರ್ ನಿಸಾರ್ ಅಹ್ಮದ್ ಶೇಖ್ (32), ಅಬ್ದುಲ್ ರಶೀದ್ ಮಕಾನದಾರ (51) ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಎಂದು ಗುರುತಿಸಲಾಗಿದೆ. ಈ ಮೂವರು ತಮ್ಮನ್ನು ಪತ್ರಕರ್ತರೆಂದು ಪರಿಚಯಿಸಿಕೊಂಡು ಮಹಿಳಾ ಅಧಿಕಾರಿಗೆ ಮಾನಹಾನಿ ಬೆದರಿಕೆ ಒಡ್ಡಿ, ಬರೋಬ್ಬರಿ ಒಂದು ಕೋಟಿ ರೂಪಾಯಿ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಇತ್ತೀಚೆಗೆ 50 ಲಕ್ಷ ರೂಪಾಯಿ ನೀಡುವಂತೆ ಕೂಡ ತೀವ್ರ ಒತ್ತಡ ಹೇರುತ್ತಿದ್ದರೆಂದು ತಿಳಿದುಬಂದಿದೆ.
ಬ್ಲ್ಯಾಕ್ ಮೇಲ್‌ನಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದ ಮಹಿಳಾ ಅಧಿಕಾರಿ, ಕೊನೆಗೂ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆಯೇ ಸಿಪಿಐ ಬಿ.ಆರ್. ಗಡ್ಡೇಕರ್ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ಬ್ಲ್ಯಾಕ್ ಮೇಲ್ ಜಾಲಕ್ಕೆ ಬಿಗ್ ಬ್ರೇಕ್ ಹಾಕಿದ್ದಾರೆ.
ಪ್ರಕರಣ ದಾಖಲಿಸದಂತೆ ವಿವಿಧ ಮಾರ್ಗಗಳಲ್ಲಿ ಒತ್ತಡ ಹೇರಲು ಆರೋಪಿಗಳು ಯತ್ನಿಸಿದ್ದರೂ, ಯಾವುದೇ ಪ್ರಭಾವಕ್ಕೆ ಒಳಗಾಗದ ಮಾಳಮಾರುತಿ ಪೊಲೀಸರು, ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಈ ನಕಲಿ ಪತ್ರಕರ್ತರ ಜಾಲ ಇನ್ನಷ್ಟು ವಿಸ್ತಾರವಾಗಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ.
ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಮಾತನಾಡಿ, “ಈ ಬ್ಲ್ಯಾಕ್‌ಮೇಲ್ ಪ್ರಕರಣದ ಹಿಂದೆ ದೊಡ್ಡ ಜಾಲವಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರೀಲ್ಸ್ ಮಾಡಿ ಮತ್ತೆ ವಿವಾದಕ್ಕೆ ಸಿಲುಕಿದ ಬಿಗ್‌ಬಾಸ್ ಖ್ಯಾತಿಯ ರಜತ್.. ದೂರು ದಾಖಲು!



















