ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮಾಡುತ್ತಿದ್ದಾನೆಂದು ಯುವತಿಯೊಬ್ಬರು ಕಿರುತೆರೆ ನಟನ ವಿರುದ್ಧ ದೂರು ದಾಖಲಿಸಿದ್ದಾರೆ.
ಕಿರುತೆರೆಯಲ್ಲಿ ನಟಿಸುತ್ತಿರುವ ವರುಣ್ ಆರಾಧ್ಯ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ಪ್ರೀತಿಸಿದ ಯುವತಿಯ ಖಾಸಗಿ ಪೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪಶ್ಚಿಮ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರುಣ್ ಆರಾಧ್ಯ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಆನಂತರ ಅದು ಬ್ರೇಕಪ್ ಆಗಿತ್ತು. ಹೀಗಾಗಿ ಆತ ಮತ್ತೋರ್ವ ಯುವತಿಯನ್ನು ಪ್ರೀತಿಸುತ್ತಿದ್ದಾನೆ ಎನ್ನಲಾಗಿದೆ. ಆದರೆ, ಬ್ರೇಕಪ್ ಆದರೂ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿದ ಆರೋಪವನ್ನು ಯುವತಿ ಮಾಡಿದ್ದಾರೆ.
2019ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವತಿಯ ಜತೆ ನಟ ವರುಣ್ ಆರಾಧ್ಯ ಪ್ರೀತಿಯಲ್ಲಿ ಬಿದ್ದಿದ್ದ. ಆ ಯುವತಿ ಜಾಲತಾಣದ ಮಾರ್ಕೆಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಸುಮಾರು ನಾಲ್ಕು ವರ್ಷಗಳ ಕಾಲ ಪರಸ್ಪರ ಪ್ರೀತಿಯಲ್ಲಿದ್ದ ಜೋಡಿಯ ಮಧ್ಯೆ ಸಣ್ಣ ವಿಷಯಕ್ಕೆ ಮನಸ್ತಾಪವಾಗಿದೆ. ಹೀಗಾಗಿ ಇಬ್ಬರೂ ದೂರವಾಗಿದ್ದರು.
ಆದರೆ, 2023ರಲ್ಲಿ ವರುಣ್ ಮೊಬೈಲ್ ನ್ನು ಯುವತಿ ನೋಡಿದಾಗ ಆತನ ಮೊಬೈಲ್ ನಲ್ಲಿ ಬೇರೆ ಯುವುತಿಯ ಖಾಸಗಿ ಫೋಟೋಗಳು ಸಿಕ್ಕಿವೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ, ಬೇರೆ ಹುಡುಗಿ ಜೊತೆಗಿನ ಸಂಪರ್ಕದ ಬಗ್ಗೆ ಮಾಹಿತಿ ಬಹಿರಂಗ ಮಾಡದಂತೆ ಬೆದರಿಕೆ ಹಾಕಿದ್ದಾನೆ. ಖಾಸಗಿ ಫೋಟೋ ಬಗ್ಗೆ ಬಾಯಿಬಿಡದಂತೆ ಮಾಜಿ ಪ್ರಿಯತಮೆಗೆ ಧಮ್ಕಿ ಹಾಕಿದ್ದಾನೆ. ‘ನನ್ನ ಬಳಿ ನಿನ್ನ ಜೊತೆಗಿರುವ ಖಾಸಗಿ ಫೋಟೋ, ವಿಡಿಯೋಗಳಿವೆ. ನೀನು ನನ್ನ ವಿಚಾರ ಬಾಯಿಬಿಟ್ಟರೆ ಖಾಸಗಿ ಪೋಟೋ ಹರಿಬಿಡುತ್ತೇನೆ ಎಂದು ಹೆದರಿಸಿದ್ದಾನೆ ಎನ್ನಲಾಗಿದೆ. ಸದ್ಯ ಯುವತಿ ಈ ಕುರಿತು ಆರೋಪಿಸಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.