ಮಂಡ್ಯ: ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯರ ಬೆತ್ತಲೆ ಫೋಟೋ ಕ್ಲಿಕ್ಕಿಸಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದ್ದು, ಸದ್ಯ ಆತನ್ನು ಪೊಲೀಸರು ಬಂಧಿಸಿದ್ದಾರೆ.
ಈತನ ಹತ್ತಿರ ವಿದ್ಯಾರ್ಥಿನಿಗಳು ಕ್ರೀಡೆ ಹಾಗೂ ಚಿತ್ರಕಲೆ (Sports, Painting) ಕಲಿಯಲು ಬರುತ್ತಿದ್ದರು. ಅವರೆಲ್ಲ ಪ್ರೌಢ ಶಾಲೆಯೊಂದರ ವಿದ್ಯಾರ್ಥಿನಿಯರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ ಘಟನೆ ನಡೆದಿದೆ. ತಾಲೂಕಿನ ಅಮೃತಹಳ್ಳಿಯ ಯೋಗಿ ಬಂಧಿತ ಆರೋಪಿಯಾಗಿದ್ದಾನೆ. ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ನಾಲ್ವರು ವಿದ್ಯಾರ್ಥಿನಿಯರ ಹೇಳಿಕೆ ಆಧರಿಸಿ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ (Child Rights Protection Unit) ಕಾನೂನು ಪರಿವೀಕ್ಷಣಾಧಿಕಾರಿ ಎಸ್.ಎಂ. ಶೈಲಜಾ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿ ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರು 15 ರಿಂದ 17 ವರ್ಷ ವಯಸ್ಸಿನವರು ಎಂದು ತಿಳಿದುಬಂದಿದೆ.
ಈತ ಅದೇ ಪ್ರೌಢಶಾಲೆಯಲ್ಲೇ ಹಳೆಯ ವಿದ್ಯಾರ್ಥಿಯಾಗಿದ್ದ. ಶಾಲೆ ಸಮೀಪದಲ್ಲೇ ಸ್ವಂತ ತರಬೇತಿ ಕೇಂದ್ರ ನಡೆಸುತ್ತಿದ್ದ. ಕೆಲ ವಿದ್ಯಾರ್ಥಿನಿಯರಿಗೆ ಕ್ರೀಡೆ, ಚಿತ್ರಕಲೆಯಲ್ಲಿ ಆಸಕ್ತಿ, ಇದ್ದ ಕಾರಣ, ತರಬೇತಿಗೆ ಸೇರಿಕೊಂಡಿದ್ದರು. ಅಲ್ಲಿ ಬರುವವರಿಗೆ ಅಣ್ಣನಂತೆ ನಟಿಸಿ, ನಂಬಿಸುತ್ತಿದ್ದ. ತರಬೇತಿ ಕೇಂದ್ರದ ಪಿಟಿ ರೂಮಿನಲ್ಲೇ ಇರುತ್ತಿದ್ದ ಈತ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವಾಗ ತನ್ನ ಮೊಬೈಲ್‌ನಿಂದ ಬೆತ್ತಲೆ, ಅರೆಬೆತ್ತಲೆ ಫೋಟೋಗಳನ್ನು ತೆಗೆದು, ಪೋಷಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದ.
ತನ್ನೊಂದಿಗೆ ಮಲಗುವಂತೆ ಬಲವಂತ ಮಾಡುತ್ತಿದ್ದ. ತರಬೇತಿ ನೀಡುವ ವೇಳೆ ಕೆಟ್ಟದ್ದಾಗಿ ವರ್ತಿಸುತ್ತಿದ್ದ. ಒಂದೊಮ್ಮೆ ಅದೇ ಗ್ರಾಮದ ವಿದ್ಯಾರ್ಥಿನಿಯೋರ್ವಳಿಗೆ ಐಸ್‌ಕ್ರೀಮ್ ಕೊಡಿಸಿ, ಪ್ರಜ್ಞೆ ತಪ್ಪಿಸುವಂತೆ ಮಾಡಿದ್ದ. ನಂತರ ಆಕೆಯ ಬೆತ್ತಲೆ ಫೋಟೋ ಕ್ಲಿಕ್ಕಿಸಿ, ನೀನು ನನ್ನೊಂದಿಗೆ ಮಲಗದಿದ್ದರೆ, ನಿಮ್ಮ ಪೋಷಕರಿಗೆ ಫೋಟೋ ತೋರಿಸುವುದಾಗಿ ಬೆದರಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ವಿದ್ಯಾರ್ಥಿನಿಯರು ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕಕ್ಕೆ ವಿದ್ಯಾರ್ಥಿನಿಯರು ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ. ಈಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.