ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಕುರಿತು ಸ್ವಪಕ್ಷದಲ್ಲಿಯೇ ಭಿನ್ನಾಭಿಪ್ರಾಯಗಳು ಮೂಡಿವೆ. ಆಗಾಗ ಇವುಗಳ ಕುರಿತು ಶಾಸಕರು, ಸಚಿವರು, ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಗ್ಯಾರಂಟಿ ಯೋಜನೆಗಳ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. “ಗ್ಯಾರಂಟಿ ಯೋಜನೆಗಳಲ್ಲೇ ಮುಳುಗಿರುವುದು ಸಾಕು” ಎಂದು ಅವರು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದರು. “ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಲ್ಲೇ ಮುಳುಗೋದು ಬೇಡ. ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರಲಿ. ಆದರೆ, ಸರ್ಕಾರವು ಪ್ರಣಾಳಿಕೆಯಲ್ಲಿ ಘೋಷಿಸಿರುವ ಭರವಸೆಗಳನ್ನು ಕೂಡ ಈಡೇರಿಸಲು ಗಮನ ಹರಿಸಬೇಕು. ಬರೀ ಗ್ಯಾರಂಟಿ ಯೋಜನೆಗಳ ಕುರಿತೇ ಯೋಚಿಸಬಾರದು” ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಕೃಷಿ ಕಾಯ್ದೆಯನ್ನು ಹಿಂಪಡೆದಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ಹಿಂಪಡೆದಿಲ್ಲ. ಈ ಕುರಿತು ಕೂಡಲೇ ಆ ಕೆಲಸ ಮಾಡಬೇಕು. ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಕಾನೂನುಬಾಹಿರವಾಗಿ ಮಾಡಿತ್ತು. ಅದನ್ನು ನಾವು ಹಿಂಪಡೆಯಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಘ ಪರಿವಾರದವರೇ ಇದ್ದಾರೆ. ಅದನ್ನು ಬದಲಾಯಿಸಬೇಕು. ಜಾತಿ ಗಣತಿ ವರದಿ ಜಾರಿ ಮಾಡಬೇಕು. ಇಷ್ಟೆಲ್ಲ ಕೆಲಸಗಳು ಬಾಕಿ ಇರುವಾಗ ಗ್ಯಾರಂಟಿ ಯೋಜನೆಗಳ ಬಗ್ಗೆಯೇ ಯೋಚಿಸುವುದು ಸಮಂಜಸ ಅಲ್ಲ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 59 ಸಾವಿರ ಕೋಟಿ ರೂ. ಬೇಕಾದ ಕಾರಣ ರಾಜ್ಯ ಸರ್ಕಾರವು ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣ ಮಾಡುವುದರಲ್ಲೇ ನಿರತವಾಗಿದೆ. ಇದರಿಂದಾಗಿ ಬಸ್ ಟಿಕೆಟ್ ದರ, ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದೆ. ಅತ್ತ, ಶಾಸಕರು, ಸಚಿವರಂತೂ ಅಭಿವೃದ್ಧಿ ಕೆಲಸಗಳಿಗೆ ಅನುದಾನವಿಲ್ಲ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಬಿಕೆ ಹರಿಪ್ರಸಾದ್ ಹೇಳಿಕೆಯು ಚರ್ಚೆಗೆ ಕಾರಣವಾಗಿದೆ.