ಬೆಂಗಳೂರು: ಈ ಸರ್ಕಾರಕ್ಕೆ ಬಡವರೂ ಬೇಡ; ರೈತರೂ ಬೇಡ. ರಾಜ್ಯದಲ್ಲಿ ಯಾವ ಸಮಾಜಕ್ಕೂ ನ್ಯಾಯ ಕೊಡುವ ಕಾಳಜಿ ಇಲ್ಲದ ಸರಕಾರ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು ಬಿಜೆಪಿಯ ಅಹೋರಾತ್ರಿ ಧರಣಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ ಎಂದು ಗುಡುಗಿದರು.
ಜನಪರ ಕಾಳಜಿ ಇದ್ದಲ್ಲಿ ಈ ರೀತಿ ಬೆಲೆ ಏರಿಕೆ ಮಾಡುತ್ತಿರಲಿಲ್ಲ. ಸಿದ್ದರಾಮಯ್ಯನವರೇ ನಿಮ್ಮ ಸರಕಾರ ಅಧಿಕಾರದ ಅಮಲಿನಲ್ಲಿದೆ. ಈ ಅಧಿಕಾರದ ದರ್ಪ- ಅಮಲನ್ನು ಇಳಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ ಎಂದು ಎಚ್ಚರಿಸಿದರು. ನಿಮ್ಮ ಅಧಿಕಾರದ ಸೊಕ್ಕನ್ನು ಇಳಿಸುವ ಶಕ್ತಿ ಬಿಜೆಪಿಗೆ ಇದೆ. ನಿಮ್ಮ ದರ್ಪ ಇಳಿಸುವ ಶಕ್ತಿ ಈ ನಾಡಿನ ಮತದಾರರಿಗೆ ಇದೆ ಎಂದು ತಿಳಿಸಿದರು. ಇಟ್ಟ ಗುರಿ, ಮುಂದಿಟ್ಟ ಹೆಜ್ಜೆ ಹಿಂದೆ ಸರಿಸುವ ಪ್ರಶ್ನೆಯೇ ಇಲ್ಲ; ನಿನ್ನೆಯಿಂದ ಪ್ರಾರಂಭವಾದ ಅಹೋರಾತ್ರಿ ಧರಣಿ ಇವತ್ತಿಗೆ ಮುಕ್ತಾಯವಾಗುತ್ತಿಲ್ಲ; ಏ. 5ರಂದು ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್ ಹೋರಾಟ ನಡೆಯಲಿದೆ. ಏ.7ರಿಂದ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಈ ಭ್ರಷ್ಟ, ದುಷ್ಟ ಬಡವಿರೋಧಿ, ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಜನಾಕ್ರೋಶ ಯಾತ್ರೆಯನ್ನು ಮೈಸೂರಿನಿಂದ ಆರಂಭಿಸುತ್ತೇವೆ ಎಂದು ತಿಳಿಸಿದರು. ಪ್ರತಿ ಜಿಲ್ಲೆಗೂ ಬರಲಿದ್ದೇವೆ. ನಾಡಿನ ಜನತೆ, ಬಡವರ, ರೈತರ ಧ್ವನಿ ಆಗುವ ಹಾಗೂ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ. ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಸಹಕರಿಸಲು ವಿನಂತಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಪಕ್ಷದಲ್ಲಿರುವ ಸಿದ್ದರಾಮಯ್ಯರಿಗೆ ನಟ್ಟು, ಬೋಲ್ಟ್ ಟೈಟ್ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಯಾವಾಗ ಮಾಡುತ್ತೀರಿ ಎಂದು ವ್ಯಂಗ್ಯವಾಗಿ ಕೇಳಿದರು. ನೀವು ನಟ್ಟು, ಬೋಲ್ಟ್ ಬಿಚ್ತೀರಾ? ಟೈಟ್ ಮಾಡುತ್ತೀರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಮುಖ್ಯಮಂತ್ರಿಗಳೇ, ನಿಮ್ಮದು ಟೈಟ್ ಆಗ್ತ ಇಲ್ಲ; ಲೂಸ್ ಆಗ್ತ ಇದೆ ಎಂದು ಹೇಳಿದರು.ನೀವು ಗ್ಯಾರಂಟಿಗಳನ್ನೂ ಸರಿಯಾಗಿ ತಲುಪಿಸಿಲ್ಲ; ಬೆಲೆ ಏರಿಕೆ ಮಾಡಿದ್ದು ದುಡ್ಡು ಹೊಡೆಯಲಿಕ್ಕೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು. ಸತ್ಯ ಒಪ್ಪಿಕೊಂಡರೆ ನಿಮ್ಮ ಶಿಕ್ಷೆ ಕಡಿಮೆ ಆಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಪಕ್ಷದ ಪ್ರಮುಖರು, ಕಾರ್ಯಕರ್ತರು ಇದ್ದರು.