ಮುಂಬಯಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ‘ಮಹಾಯುತಿ’ ಮೈತ್ರಿ ಗೆಲುವು ಸಾಧಿಸಿದೆ. ಅದರಲ್ಲೂ ಬಿಜೆಪಿಯ ಜಯವಂತೂ ಭರ್ಜರಿಯಾಗಿದೆ. ಬಿಜೆಪಿಯ ಈ ಜಯ ಈಗ ಮೈತ್ರಿಯ ಇನ್ನಿತರ ಪಕ್ಷಗಳಿಗೆ ಸಂಕಷ್ಟ ತಂದೊಡ್ಡುವಂತಿದೆ. ಕಳೆದ ಬಾರಿಯ ಸ್ಥಿತಿ ಮತ್ತೆ ಮಹಾರಾಷ್ಟ್ರದಲ್ಲಿ ಮರುಕಳಿಸಲಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಮಹಾಯುತಿ 288ರಲ್ಲಿ 230ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಬಿಜೆಪಿ ಏಕಾಂಗಿಯಾಗಿ 133ರಲ್ಲಿ ಗೆಲುವಿನತ್ತ ಇದೆ. ಇದು ಬಿಜೆಪಿಯ ಆತ್ಮವಿಶ್ವಾಸಕ್ಕೆ ದಾರಿ ಮಾಡಿಕೊಟ್ಟಿದೆ. ಹೀಗಾಗಿ ಬಿಜೆಪಿಯ ಮುಂದೆ ಮೈತ್ರಿಯ ಯಾವ ಪಕ್ಷವೂ ಸಿಎಂ ಸ್ಥಾನದ ಬೇಡಿಕೆ ಪ್ರಸ್ತಾಪಿಸದ ವಾತಾವರಣ ಸೃಷ್ಟಿಯಾಗಿದೆ. ಒಂದು ವೇಳೆ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದರೆ, ಕಳೆದ ಬಾರಿಯ ಸ್ಥಿತಿ ಮತ್ತೆ ಮರುಕಳಿಸುವ ಸಾಧ್ಯತೆ ಇದೆ.
ಬಿಜೆಪಿ ಏಕಾಂಗಿಯಾಗಿ ಅಧಿಕಾರಕ್ಕೆ ಏರಬೇಕಾದರೆ, ಅದಕ್ಕೆ 12 ಸ್ಥಾನಗಳು ಮಾತ್ರ ಬೇಕು. ಹೀಗಾಗಿ ಮೈತ್ರಿ ಪಕ್ಷಗಳಾದ ಶಿಂಧೆ ಶಿವಸೇನೆ ಹಾಗೂ ಅಜಿತ್ ಪವಾರ್ ಎನ್‌ಸಿಪಿ ಬೆಲೆ ಕಳೆದುಕೊಂಡಿವೆ. ಕಳೆದ ಬಾರಿಯ ಚುನಾವಣೆಯಲ್ಲಿ ಕೂಡ ಶಿವಸೇನೆ ಹಾಗೂ ಬಿಜೆಪಿ ಒಟ್ಟಾಗಿ ಚುನಾವಣೆಗೆ ಸ್ಪರ್ಧಿಸಿದ್ದವು. ಆ ವೇಳೆ ಕೂಡ ಬಿಜೆಪಿಯ ಮೈತ್ರಿ ಭಾರೀ ಜಯ ಸಾಧಿಸಿತ್ತು. ಬಿಜೆಪಿ 105 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 56ರಲ್ಲಿ ಗೆದ್ದಿತ್ತು. ಬಿಜೆಪಿಗಿಂತ ಅರ್ಧ ಸ್ಥಾನಗಳಲ್ಲಿ ಜಯ ಸಾಧಿಸಿದ್ದರೂ ಶಿವಸೇನೆ ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿತ್ತು. ಇದಕ್ಕೆ ಬಿಜೆಪಿ ಒಪ್ಪಲಿಲ್ಲ. ಆಗ ಶಿವಸೇನೆಯ ಠಾಕ್ರೆ ಕಾಂಗ್ರೆಸ್ ನತ್ತ ಮುಖ ಮಾಡಿ, ಸಿಎಂ ಆದರು. ಆದರೆ, ಕೆಲವೇ ದಿನಗಳಲ್ಲಿ ಶಿವಸೇನೆ ಛಿದ್ರವಾಯಿತು. ಆನಂತರ ಏಕನಾಥ್ ಶಿಂಧೆ 40 ಸದಸ್ಯರನ್ನು ಕರೆದುಕೊಂಡು ಹೋಗಿ ಬಿಜೆಪಿಯೊಂದಿಗೆ ಕೈ ಜೋಡಿಸಿ, ಸಿಎಂ ಆದರು. ಈಗ ಏಕನಾಥ್ ಶಿಂಧೆ ಅವರಿಗೂ ಅದೇ ಪರಿಸ್ಥಿತಿ ಬಂದಿದೆ.
ಬಿಜೆಪಿಯೊಂದಿಗೆ ಸಿಎಂ, ಡಿಸಿಎಂ, ಸಚಿವ ಸ್ಥಾನಕ್ಕೆ ಗುದ್ದಾಡದ ಸ್ಥಿತಿ ಈಗ ಮೈತ್ರಿಯ ಭಾಗವಾಗಿರುವ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಹಾಲಿ ಡಿಸಿಎಂ ಅಜಿತ್ ಪವಾರ್ ಗೆ ಎದುರಾಗಿದೆ. ಆದರೂ ಮಹಾರಾಷ್ಟ್ರದಲ್ಲಿ ಏನಾಗಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.