ಮಂಗಳೂರು: ಹಿಂದೂ ಶ್ರದ್ಧಾ ಕೇಂದ್ರದ ಮೇಲೆ ಅಪಮಾನ, ಅಪಪ್ರಚಾರ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಇಡೀ ರಾಜ್ಯ ಮತ್ತು ದೇಶಕ್ಕೆ ನಾಳೆ (ಸೆ.1) ನಡೆಯುವ ‘ಧರ್ಮಸ್ಥಳ ಚಲೋ’ ಸಮಾವೇಶದಲ್ಲಿ ನೀಡಲಿದ್ದೇವೆ ಎಂದು ಸಂಸದ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಲ್ಲಿ ಇಂದು(ಆದಿತ್ಯವಾರ) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬ್ರಿಜೇಶ್ ಚೌಟ, ಬಿಜೆಪಿ ಎಂದಿಗೂ ಸನಾತನ ಧರ್ಮದ ಸಂಸ್ಕೃತಿ ಮತ್ತು ಜೊತೆಗೆ ಹಿಂದೂ ಶ್ರದ್ಧಾ ಕೇಂದ್ರಗಳ ಜೊತೆಗೆ, ಹಿಂದೂ ಸಮಾಜದ ಜೊತೆಗೆ ಇದ್ದೇವೆ ಎಂದು ತೋರಿಸುವ ಪ್ರಯತ್ನದಲ್ಲಿ ನಾಳೆ ‘ಧರ್ಮಸ್ಥಳ ಚಲೋ’ ಸಮಾವೇಶ ನಡೆಯಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ, ಕು. ಶೋಭಾ ಕರಂದ್ಲಾಜೆ, ಬಿಜೆಪಿ ಕರ್ನಾಟಕ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಬಿಜೆಪಿ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು ಹಾಗೂ ಲಕ್ಷಾಂತರ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಮಸ್ತ ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪುಣ್ಯಕ್ಷೇತ್ರದ ವಿರುದ್ಧ ಹಲವಾರು ಅಪಪ್ರಚಾರಗಳು, ಆರೋಪ ಮಾಡಲಾಗುತ್ತಿದೆ. ಸುಳ್ಳು ಆಪಾದನೆಗಳು, ಯಾವುದೇ ಸಾಕ್ಷ್ಯಾಧಾರವಿಲ್ಲದೆ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ತನಿಖೆ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ನಡೆಯಲಿದ್ದು, ಕ್ಷೇತ್ರದ ಪಾವಿತ್ರ‍್ಯಕ್ಕೆ ಯಾವುದೇ ಧಕ್ಕೆಯಾಗಬಾರದು. ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ನಂಬಿಕೊಂಡಿರುವ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ಆಗಬಾರದು. ಹಿಂದೂ ಶ್ರದ್ಧಾ ಕೇಂದ್ರಗಳಿಗೆ ಅಪಪ್ರಚಾರ ಆಗಬಾರದು ಎಂಬ ಉದ್ದೇಶದಿಂದ ಸಮಾವೇಶವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಬಿಜೆಪಿಯು ಕಾನೂನು, ಸಂವಿಧಾನ ಮತು ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ನಂಬಿಕೆ ಮತ್ತು ಶ್ರದ್ಧೆಯನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಒಂದು ಪಕ್ಷ. ಧರ್ಮಸ್ಥಳದ ಎಸ್‌ಐಟಿ ತನಿಖೆಯನ್ನು ಬಿಜೆಪಿ ಸ್ವಾಗತಿಸಿತ್ತು. ಆದರೆ ತನಿಖೆ ಯಾವ ರೀತಿ ಹೋಗುತ್ತಿದೆ ಎಂಬ ಸಂಶಯವಿದೆ. ಕಮ್ಯುನಿಸ್ಟರು, ಎಸ್‌ಡಿಪಿಐ, ಮತ್ತು ಪಿಎಫ್‌ಐ ಸಂಘಟನೆಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.



















