ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಡಿಸಿಎಂ ಟಾಸ್ಕ್ ಕೊಟ್ಟಿದ್ದರು. ಆದರೆ, ಅದು ಯಶಸ್ವಿಯಾಗಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಈ ಮಧ್ಯೆ ಬಿಜೆಪಿ ಅಭಿಯಾನ ಆರಂಭಿಸಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯೂ ಆಗಿರುವ ಬ್ರ್ಯಾಂಡ್ ಬೆಂಗಳೂರಿಗೆ ವಿರುದ್ಧವಾಗಿ ಜಾಹೀರಾತನ್ನು ಬಿಜೆಪಿ ಪ್ರದರ್ಶಿಸುತ್ತಿದೆ.ಬೆಂಗಳೂರಿನ ರಸ್ತೆಯೊಂದರಲ್ಲಿ ಇರುವ ಗುಂಡಿಯಲ್ಲಿ ಬಿಜೆಪಿ ತನ್ನ ಜಾಹೀರಾತು ಪ್ರದರ್ಶಿಸಿ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಬ್ರ್ಯಾಂಡ್ ಬೆಂಗಳೂರಿನ ಗ್ರ್ಯಾಂಡ್ ಜಾಹೀರಾತು! ಎಂದು ಕಾಲೆಳೆದಿದೆ. ರಾಜ್ಯ ಸರ್ಕಾರ ಉದ್ಯಾನ ನಗರಿಯ ರಸ್ತೆಗಳನ್ನು ಕೊಳಚೆ ಗುಂಡಿಯಾಗಿ ಪರಿವರ್ತಿಸಿದೆ ಎಂದು ಆರೋಪ ಮಾಡಿದೆ.
ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿರುವವರಿಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಸಮಯವೇ ಸಾಕಾಗುತ್ತಿಲ್ಲವೇ? ಎಂದು ಕೂಡ ಬಿಜೆಪಿ ಪ್ರಶ್ನಿಸಿದೆ. ಅಲ್ಲದೇ, ಮಳೆಯ ಆರ್ಭಟ ಜೋರಾಗಿದ್ದರೆ, ಬ್ರಾಂಡ್ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳ ಆರ್ಭಟ ಜೋರಾಗಿದೆ. ರಸ್ತೆಗುಂಡಿಗಳನ್ನು ಮುಚ್ಚಲು ಯೋಗ್ಯತೆಯಿಲ್ಲದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದೆಸೆಯಿಂದ ಜನ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೆ ಇನ್ನೆಷ್ಟು ಸಮಯ ಬೇಕು? ಎಂದು ಪ್ರಶ್ನ ಮಾಡಿದೆ.
ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಲೂಟಿ ಹೊಡೆಯವುದು ಬಿಟ್ಟು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿ ರಸ್ತೆ, ಚರಂಡಿಗಳನ್ನು ದುರಸ್ತಿ ಮಾಡಿದ್ದರೆ, ಮಳೆ ನೀರು ಸೇರಬೇಕಾದ ಸ್ಥಳಕ್ಕೆ ಸೇರುತ್ತಿತ್ತು ರಸ್ತೆಯಲ್ಲಿ ನಿಲ್ಲುತ್ತಿರಲಿಲ್ಲ. ಅಭಿವೃದ್ಧಿ ಮಾಡಲು, ಅಧಿಕಾರ ನಡೆಸಲು ಕೈಲಾಗದೆ ಇದ್ದರೆ ಸರ್ಕಾರವನ್ನು ವಿಸರ್ಜನೆ ಮಾಡಿ ಕಾಂಗ್ರೆಸ್ ಮನೆಯಲ್ಲಿ ಕೂರುವುದು ಉತ್ತಮ ಎಂದು ಕುಟುಕಿದೆ. ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ: ಒಂದೇ ಮಳೆಗೆ ಬೆಂಗಳೂರಿನ ತುಂಬಾ ಬಾಯ್ತೆರೆದಿರುವ ಯಮಸ್ವರೂಪಿ ರಸ್ತೆ ಗುಂಡಿಗಳು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಸಲಿಯತ್ತು ಏನು ಎಂಬುದನ್ನ ಬಟಾ ಬಯಲು ಮಾಡಿದೆ ಎಂದು ಬಿಜೆಪಿ ಪೋಸ್ಟ್ ನಲ್ಲಿ ಕಿಡಿಕಾರಿದೆ.