ವಿಜಯಪುರ : ಧರ್ಮಸ್ಥಳದ ಬಗ್ಗೆ ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂಬ ಉದ್ದೇಶದಿಂದ ಎಸ್ಐಟಿ ರಚನೆ ಮಾಡಲಾಯಿತು. ಆಗ ಸ್ವಾಗತ ಮಾಡಿದ ನಾಯಕರು ಈಗ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಧರ್ಮಸ್ಥಳ ಚಲೋ ಮಾಡುತ್ತಿದ್ದಾರೆ. ಬಿಜೆಪಿಯವರು ಮೊದಲು ತಮ್ಮಲ್ಲಿರುವ ಹತ್ತಾರು ಬಣಗಳನ್ನು ಸರಿ ಮಾಡಿಕೊಳ್ಳಲಿ ಎಂದು ಸಚಿವ ಎಂಬಿ ಪಾಟೀಲ್ ಕಿಡಿಕಾರಿದ್ದಾರೆ.
ಇನ್ನು, ಭಾನು ಮುಸ್ತಾಕ್ ದಸರಾ ಉದ್ಘಾಟನೆಗೆ ಆಹ್ವಾನ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ ಮಾತನಾಡಿದ ಎಂಬಿ ಪಾಟೀಲ್, “ತಾಯಿ ನನ್ನನ್ನು ಕರೆಸಿಕೊಂಡಿದ್ದಾಳೆ” ಎಂದು ಭಾನು ಮುಸ್ತಾಕ್ ಅವರೇ ಚಾಮುಂಡೇಶ್ವರಿ ಮಾತೆಯನ್ನು ತಾಯಿ ಎಂದು ಕರೆದಿದ್ದಾರೆ. ಅವರೇ ತಾಯಿ ಎಂದ ಮೇಲೆ ಇದಕ್ಕಿಂತ ಬೇರೆ ಇನ್ನೇನಿದೆ. ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾತ್ರವಲ್ಲದೇ, ಜಿಲ್ಲೆಯ ಉಸ್ತುವಾರಿ ಸಚಿವರು ಸಾಥ್ ನೀಡುತ್ತಿಲ್ಲ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿ, ಸಚಿವರಿಗೆ ಮೆಡಿಕಲ್ ಕಾಲೇಜು ವಿಚಾರದಲ್ಲಿ ಅಸಮಾಧಾನವಿದ್ದರೆ ಸಿಎಂ ಬಳಿ, ಡಿಸಿಎಂ ಬಳಿ ಮಾತನಾಡಬೇಕಿತ್ತು. ಆದರೆ ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡಬಾರದು. ನಾನು ನೀರಾವರಿ ಸಚಿವನಾಗಿದ್ದಾಗ ಯಾರು ಸಹಕಾರ ನೀಡಿದ್ದಾರೆ ಎಂಬುದು ಗೊತ್ತಿದೆ. ಅವೆಲ್ಲಾ ಹೇಳುವುದಾದರೆ ಬಳಹ ಇವೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.