ಬೆಂಗಳೂರು : ಬಿಜೆಪಿಯಲ್ಲಿನ ಆಂತರಿಕ ಕಲಹ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ಉಲ್ಭಣಗೊಂಡಿದೆ. ಹೈಕಮಾಂಡ್ ಎಚ್ಚರಿಕೆಯ ಮಧ್ಯೆಯೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ವಕ್ಫ್ ವಿರುದ್ಧ ಎರಡನೇ ಹಂತದ ಹೋರಾಟಕ್ಕೆ ಮುಂದಾಗಿದೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಜ. 4ರಂದು ವಕ್ಫ್ ವಿರುದ್ಧ ಎರಡನೇ ಹಂತದ ಹೋರಾಟ ನಡೆಸಲು ಯತ್ನಾಳ್ ಮತ್ತು ತಂಡ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಮೂರು ದಿನಗಳ ಹಿಂದೆ ಬಳ್ಳಾರಿ ಮತ್ತು ಹೊಸಪೇಟೆಗೆ ಭೇಟಿ ನೀಡಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ವಕ್ಫ್ ಬೋರ್ಡ್ ವಿಚಾರದಲ್ಲಿ ಎರಡನೇ ಹಂತದ ಹೋರಾಟ ನಡೆಸುತ್ತಿದ್ದೇವೆ. ನಮ್ಮದು ಪಕ್ಷಾತೀತ ಹೋರಾಟ. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಸಚಿವ ಆನಂದ್ ಸಿಂಗ್, ಕಾಂಗ್ರೆಸ್ ನಾಯಕರು ಕೂಡ ಭಾಗಿಯಾಗಬಹುದು ಎಂದಿದ್ದಾರೆ.
ವಕ್ಫ್ನಿಂದ ತೊಂದರೆಗೆ ಒಳಗಾದವರ ದಾಖಲಾತಿಗಳು ಹಾಗೂ ಮಾಹಿತಿಗಳನ್ನು ಪಡೆದು ಜ. 6 ಮತ್ತು 7 ರಂದು ದೆಹಲಿಯಲ್ಲಿ ವಕ್ಫ್ ಜಂಟಿ ಸದನ ಸಮಿತಿಗೆ ವರದಿ ಸಲ್ಲಿಸಲು ಯತ್ನಾಳ್ ಬಣ ತೀರ್ಮಾನಿಸಿದೆ ಎನ್ನಲಾಗಿದೆ.