ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿರುವ ಬಿಜೆಪಿ ರೆಬಲ್ ನಾಯಕರು ಪಕ್ಷದ ರಾಜ್ಯ ನಾಯಕತ್ವದ ಸೂಚನೆಗೂ ಕಾಯದೆ ಪ್ರತ್ಯೇಕವಾಗಿ ಹೋರಾಟ ನಡೆಸಲು ಮುಂದಾಗಿದೆ.
ಈ ಹಿಂದೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಭಿನ್ನರು ವಕ್ಫ್ ಹೋರಾಟವನ್ನು ಹಮ್ಮಿಕೊಂಡಿದ್ದರು. ಇದೀಗ ಬಾಂಗ್ಲಾ ದೇಶದಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಅಕ್ರಮ ವಲಸಿಗರ ವಿರುದ್ಧ ಹೋರಾಟ ನಡೆಸಲು ಒಂದಡಿ ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಜೆಪಿಯ ರೆಬಲ್ ನಾಯಕರಾದ ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಅರವಿಂದ ಲಿಂಬ, ಶಾಸಕ ಬಿ ಪಿ ಹರೀಶ್ ತಂಡ ಬಾಂಗ್ಲಾ ವಲಸಿಗರ ವಿರುದ್ಧ ಧ್ವನಿ ಎತ್ತಿದೆ. ಇದರ ಮುಂದುವರಿದ ಭಾಗವಾಗಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಜಾಗೃತಿ ಅಭಿಯಾನಕ್ಕೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಚಾಲನೆ ನೀಡಲಾಗಿದೆ.
ಬಿಜೆಪಿಯ ಮೂವರು ರೆಬಲ್ ನಾಯಕರ ತಂಡ ಸಕಲೇಶಪುರಕ್ಕೆ ಭೇಟಿ ನೀಡಿತ್ತು. ಸ್ಥಳೀಯರ ಜೊತೆಗೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರ ಬಂಗಾರಪ್ಪ “ಬಿಜೆಪಿ ವತಿಯಿಂದ ರಾಷ್ಟ್ರದ ಭದ್ರತೆ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಯ ದೃಷ್ಠಿಯಿಂದ, ಸಕಲೇಶಪುರದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಸಾರ್ವಜನಿಕ ಜಾಗೃತಿ ಮೂಡಿಸಲಾಗುವುದು” ಎಂದಿದ್ದಾರೆ.



















