ಚೆನ್ನೈ: ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆ(Delimitation)ಯಿಂದ ಬಾಧಿತವಾಗುವ ರಾಜ್ಯಗಳ ಮೊದಲ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಸಭೆಯನ್ನು ತಮಿಳುನಾಡು ಆಯೋಜಿಸಿದ್ದು, ಶನಿವಾರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಈ ಸಭೆ ನಡೆಯಲಿದೆ.
ಮಾರ್ಚ್ 5 ರಂದು ಚೆನ್ನೈನಲ್ಲಿ ಇದೇ ವಿಷಯದ ಬಗ್ಗೆ ನಡೆದ ಸರ್ವಪಕ್ಷ ಸಭೆಯ ನಂತರ, ಚೆನ್ನೈನ ಐಟಿಸಿ ಚೋಳದಲ್ಲಿ ಜೆಎಸಿ ಸಭೆಯನ್ನು ಆಯೋಜಿಸಲಾಗಿದೆ.
ಶನಿವಾರ ಸಭೆ ಆರಂಭಕ್ಕೂ ಮುಂಚಿತವಾಗಿ, ಭಾಗವಹಿಸುತ್ತಿರುವ ಎಲ್ಲ ನಾಯಕರನ್ನೂ ಸ್ವಾಗತಿಸಿ ಟ್ವೀಟ್ ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, “ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ ರಾಜ್ಯಗಳು ನ್ಯಾಯಯುತ ಕ್ಷೇತ್ರ ಪುನರ್ ವಿಂಗಡಣೆ (#FairDelimitation)ಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಅದರ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಲು ಒಗ್ಗೂಡಿದ ದಿನ ಎಂದು ಈ ದಿನವು ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ” ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ, ಚೆನ್ನೈ ಕಾರ್ಪೊರೇಷನ್ ಕಟ್ಟಡದ ಹೊರಭಾಗದಲ್ಲೂ “ನ್ಯಾಯಯುತ ಕ್ಷೇತ್ರ ಪುನರ್ ವಿಂಗಡಣೆ” (#FAIRDELIMITATION) ಎಂದು ಬರೆದಿರುವ ಫಲಕವನ್ನು ಅಳವಡಿಸಲಾಗಿದೆ. ಕೇರಳ, ತೆಲಂಗಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ರಾಜಕೀಯ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕದ ಪ್ರತಿನಿಧಿಯಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಸ್ಟಾಲಿನ್, “ಕುಟುಂಬ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದ ರಾಜ್ಯಗಳ ಮೇಲೆ ಕ್ಷೇತ್ರ ಪುನರ್ ವಿಂಗಡಣೆಯು ಪ್ರತಿಕೂಲ ಪರಿಣಾಮ ಬೀರಲಿದೆ. ಅದಕ್ಕಾಗಿಯೇ ನಾವು ಅದನ್ನು ವಿರೋಧಿಸುತ್ತಿದ್ದೇವೆ. ಮಣಿಪುರವು ಕಳೆದ ಎರಡು ವರ್ಷಗಳಿಂದ ಹೊತ್ತಿ ಉರಿಯುತ್ತಿದೆ. ಅಲ್ಲಿ ಆರಂಭವಾದ ಗಲಭೆಯಿಂದ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಆ ರಾಜ್ಯದಲ್ಲಿ ಸಂಸದರೇ ಇಲ್ಲದ ಕಾರಣ ಅವರ ಧ್ವನಿಯು ಯಾರಿಗೂ ಕೇಳಿಸುತ್ತಿಲ್ಲ. ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯಾದರೆ ನಮ್ಮ ರಾಜ್ಯಗಳನ್ನು ಪ್ರತಿನಿಧಿಸುವ ಸಂಸದರ ಸಂಖ್ಯೆಯೂ ಇಳಿಕೆಯಾಗಿ, ನಮಗೂ ಇದೇ ಸ್ಥಿತಿ ಎದುರಾಗಬಹುದು” ಎಂದರು. ಜೊತೆಗೆ ಅವರು ಈ ಸಭೆಯನ್ನು ‘ನ್ಯಾಯೋಚಿತ ಕ್ಷೇತ್ರ ಪುನರ್ ವಿಂಗಡಣೆ ಜಂಟಿ ಕ್ರಿಯಾ ಸಮಿತಿ’ ಎಂದು ಕರೆಯುವ ನಿರ್ಣಯವನ್ನು ಮಂಡಿಸಿದರು.
ಬಿಜೆಪಿಯಿಂದ ಕಪ್ಪು ಬಾವುಟ ಪ್ರತಿಭಟನೆ:
ಏತನ್ಮಧ್ಯೆ, ಈ ಸಭೆಯ ವಿರುದ್ಧ ತಮಿಳುನಾಡು ಬಿಜೆಪಿಯು ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಗೂ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, “ಮುಖ್ಯಮಂತ್ರಿ ಸ್ಟಾಲಿನ್ ಅವರು ಇತರೆ ರಾಜ್ಯಗಳೊಂದಿಗೆ ಇರುವ ವಿವಾದಗಳನ್ನು ಬಗೆಹರಿಸುವ ಮತ್ತು ನಮ್ಮ ರಾಜ್ಯದ ಹಕ್ಕುಗಳ ಬಗ್ಗೆ ಚರ್ಚಿಸುವ ಬದಲು ರಾಜಕೀಯ ನಾಟಕವನ್ನು ಆಡುತ್ತಿದ್ದಾರೆ. ವಿಶೇಷವಾಗಿ ಕೇರಳದ ಜೊತೆಗೆ ಅವರು ತ್ಯಾಜ್ಯ ಎಸೆಯುವ ವಿಚಾರವನ್ನೂ, ಕರ್ನಾಟಕದೊಂದಿಗೆ ಮೇಕೆದಾಟು ಮತ್ತು ಕಾವೇರಿ ನದಿ ನೀರಿನ ಸಮಸ್ಯೆಯನ್ನೂ ಚರ್ಚಿಸಬೇಕಿತ್ತು. ಅದರ ಬದಲು ರಾಜಕೀಯ ಡ್ರಾಮಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ಚೆನ್ನೈನ ನಾಮಕ್ಕಲ್ ಕವಿನಾರ್ ಹಾಲ್ ನಲ್ಲಿ ತ.ನಾಡು ಸರ್ಕಾರವು ಸರ್ವಪಕ್ಷ ಸಭೆ ನಡೆಸಿತ್ತು. ಅಲ್ಲಿ ಜೆಎಸಿಯ ಪ್ರಸ್ತಾಪ ಬಂದಿದ್ದು, ಭವಿಷ್ಯದ ಜನಗಣತಿಯ ಜನಸಂಖ್ಯೆಯ ಅಂಕಿಅಂಶಗಳ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗೆ ತಮಿಳುನಾಡಿನ ವಿರೋಧವನ್ನು ಅಲ್ಲಿ ಸೇರಿದ್ದ 123 ರಾಜಕೀಯ ಪಕ್ಷಗಳ ನಾಯಕರು ಸಮರ್ಥಿಸಿಕೊಂಡಿದ್ದರು. ಆದರೆ, ರಾಜ್ಯ ಬಿಜೆಪಿ ಮಾತ್ರ ಈ ಸಭೆಯನ್ನು ಬಹಿಷ್ಕರಿಸಿತ್ತು.
ಇದಾದ ಬಳಿಕ ಸ್ಟಾಲಿನ್ ಅವರು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಪಂಜಾಬ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಜೆಎಸಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಆಹ್ವಾನಿತ ರಾಜ್ಯಗಳ ಇತರ ಪಕ್ಷಗಳ ನಾಯಕರನ್ನೂ ಸಭೆಯಲ್ಲಿ ಭಾಗವಹಿಸುವಂತ ಕೋರಿದ್ದರು. ಅದರಂತೆ ಶನಿವಾರ ಈ ಸಭೆ ಆರಂಭವಾಗಿದೆ.