ಮುಡಾ ಅಕ್ರಮ ಖಂಡಿಸಿ ಬಿಜೆಪಿಯಿಂದ ಜು.12ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.12ರಂದು ನಾನು, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್, ಬಿಜೆಪಿ ಶಾಸಕರು, ಕಾರ್ಯಕರ್ತರು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಬಡವರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಬಡವರಿಗೆ ನಿವೇಶನ ಹಂಚಬೇಕು. ಈಗಾಗಲೇ ನಡೆದ ನಿವೇಶನ ಹಂಚಿಕೆಯನ್ನು ರದ್ದು ಮಾಡಬೇಕು. ಸಿಎಂ, ಅವರ ಪತ್ನಿ ಮೇಲೆ ಆರೋಪ ಇರುವ ಕಾರಣ ಮತ್ತೊಂದು ಎಸ್‍ಐಟಿ ಮಾಡಿ ತನಿಖೆ ನಡೆಸುವುದು ಸೂಕ್ತವಲ್ಲ. ಇದು ದೊಡ್ಡ ಹಗರಣ. ಇದನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
2004ರಲ್ಲಿ ಪಾರ್ವತಮ್ಮ ಅವರ ಅಣ್ಣ ಜಮೀನು ಖರೀದಿ ಮಾಡಿದ್ದಾರೆ. ಮೂಡಾ ಸ್ವಾಧೀನದಲ್ಲಿದ್ದ ಜಾಗವನ್ನು ಮಲ್ಲಿಕಾರ್ಜುನ ಸ್ವಾಮಿ ಖರೀದಿ ಮಾಡಿದ್ದು ಹೇಗೆ? 2009 – 10ರಲ್ಲಿ ಗಿಫ್ಟ್ ಡೀಡ್ ಆದಾಗಲೂ ಈ ಜಾಗವು ಮೂಡಾ ಆರ್‌ಟಿಸಿಯಲ್ಲಿ ನಮೂದಾಗಿತ್ತು. ಭೂಮಿ ಖರೀದಿ ಆಗಿ ಕನ್ವರ್ಷನ್ ಆಗಿತ್ತು. ಗಿಫ್ಟ್ ಡೀಡ್ ಎಂದು ಮಾಹಿತಿ ಕೊಡುವಾಗಲೂ ಅದು ಕೃಷಿ ಭೂಮಿ ಆಗಿರಲಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
ತಮ್ಮ ಅವಧಿಯಲ್ಲಿ ಅವ್ಯವಹಾರ ನಡೆಸಿ, ತಾವೇ ಪರಿಹಾರ ಕೇಳಿರುವ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ. ತಮ್ಮ ಪತ್ನಿಗೆ 14 ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ. ಅದರ ಬೆಲೆ 62 ಕೋಟಿ ರೂ. ಬರಬೇಕಿದ್ದು, 18 ಕೋಟಿಯ ನಿವೇಶನ ಪಡೆದುದ್ದಾಗಿ ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿಗಳು 2013ರ ಚುನಾವಣಾ ಅಫಿಡವಿಟ್‍ನಲ್ಲಿ 3.16 ಎಕರೆ ಭೂಮಿಯನ್ನು ಉಲ್ಲೇಖಿಸಿಲ್ಲ. ಇದು ಚುನಾವಣೆ ನಿಯಮಗಳ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.
5 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ. ಹಗರಣದಲ್ಲಿ ಭಾಗಿಯಾದವರನ್ನು ಶಿಕ್ಷಿಸುವುದನ್ನು ತಪ್ಪಿಸಲು ಹಾಗೂ ರಕ್ಷಿಸಲು ಭೈರತಿ ಸುರೇಶ್ ಮುಂದಾಗಿದ್ದಾರೆ. ಮೂಡಾ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿ ವರದಿ ಕೊಟ್ಟ ಜಿಲ್ಲಾಧಿಕಾರಿಯನ್ನೂ ತರಾತುರಿಯಲ್ಲಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.