ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆಯ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ವ್ಯಾಪಕ ಚರ್ಚೆ ಮೇಲೆದ್ದ ಬೆನ್ನಲ್ಲೇ ಭಾರತದ ಮುಂದಿನ ಉಪ ರಾಷ್ಟ್ರಪತಿ ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಎನ್‌ಡಿಎ ಮೈತ್ರಿ ತೆರೆ ಎಳೆದಿದೆ.
ಬಿಜೆಪಿಯಿಂದಲೇ ಮುಂದಿನ ಅಭ್ಯರ್ಥಿ ಆಯ್ಕೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಲಂಡನ್ ಪ್ರವಾಸ ಮುಗಿಸಿ ವಾಪಸ್ ಆದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಮೂಲಗಳ ಪ್ರಕಾರ, ಬಿಜೆಪಿಯೊಂದಿಗೆ ಸೈದ್ಧಾಂತಿಕ ಹೊಂದಾಣಿಕೆ ಹಾಗೂ ಸಂಸದೀಯ ಕಾರ್ಯವಿಧಾನದಲ್ಲಿ ಹೆಚ್ಚಿನ ಅನುಭವ ಹೊಂದಿರುವ ವ್ಯಕ್ತಿಯನ್ನೇ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಈಗ ಆಯ್ಕೆಯಾಗುವ ಉಪ ರಾಷ್ಟ್ರಪತಿಗಳು 5 ವರ್ಷಗಳ ಅಧಿಕಾರವಧಿಯಲ್ಲಿ ಇರುತ್ತಾರೆ.
ಎನ್‌ಡಿಎ ಅಂಗ ಪಕ್ಷವಾದ ಜೆಡಿ(ಯು)ನಿಂದ ಉಪ ರಾಷ್ಟ್ರಪತಿ ಹುದ್ದೆಗೆ ಯಾರೊಬ್ಬರೂ ಸ್ಪರ್ಧೆಯಲ್ಲಿಲ್ಲ. ಹೀಗಾಗಿ ತೆಲುಗು ದೇಶಂ ಪಕ್ಷ ಮತ್ತು ಜೆಡಿ(ಯು) ಸೇರಿದಂತೆ ಮೈತ್ರಿಕೂಟದ ಎಲ್ಲಾ ಪಕ್ಷಗಳು ಬಿಜೆಪಿಯಿಂದಲೇ ಅಭ್ಯರ್ಥಿ ಆಯ್ಕೆ ಮಾಡಲು ಒಮ್ಮತ ಸೂಚಿಸಿವೆ ಎಂದು ಹೇಳಲಾಗಿದೆ.
ಸದ್ಯ ಪ್ರಧಾನಿ ಮೋದಿ ಅವರು ಲಂಡನ್, ಮಾಲ್ಡೀವ್ಸ್ ಪ್ರವಾಸದಲ್ಲಿದ್ದು, ವಾಪಸ್ಸಾದ ಬಳಿಕ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ವರದಿಗಳು ತಿಳಿಸಿವೆ.



















