ಮೈಸೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡಿರುವುದು ಧರ್ಮಯಾತ್ರೆ ಅಲ್ಲ, ರಾಜಕೀಯ ಯಾತ್ರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವರದಿಗಾರರಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಈಗ ಧರ್ಮಸ್ಥಳ ಪ್ರಕರಣವನ್ನು ಈಗ ಎನ್. ಐ. ಎ ತನಿಖೆ ಮಾಡಿಸಿ ಎಂದು ಹೇಳುತ್ತಿದ್ದಾರೆ. ಎಸ್.ಐ.ಟಿ ಅವರೂ ಪೊಲೀಸರು, ಎನ್.ಐ.ಎ ಅವರೂ ಪೊಲೀಸರು. ನಮ್ಮ ಪೊಲೀಸರ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲವೇ ? ಬಿಜೆಪಿ ಮೊದಲು ತನಿಖೆ ಮಾಡಿ ಎಂದು ಹೇಳಲೇ ಇಲ್ಲ. ಉತ್ಖನನ ಕಾರ್ಯ ನಡೆದ ಮೇಲೆ ಶವಗಳು ಪತ್ತೆಯಾಗದ ಮೇಲೆ ಒಬ್ಬೊಬ್ಬರೇ ಹೇಳಿಕೆ ನೀಡುವುದಕ್ಕೆ ಶುರು ಮಾಡಿದರು.
ಎಸ್.ಐ.ಟಿ ತನಿಖೆಯನ್ನು ವೀರೇಂದ್ರ ಹೆಗಡೆ ಅವರೇ ಸ್ವಾಗತ ಮಾಡಿದ್ದಾರೆ. ಹೆಗ್ಗಡೆ ಅವರ ಮೇಲೆಯೇ ಆರೋಪವಿದೆ. ಆದರೇ ಅವರೇ ಎಸ್.ಐ.ಟಿ ತನಿಖೆಯನ್ನು ಸ್ವಾಗತ ಮಾಡಿದ್ದಾರೆ. ನಾವು ತನಿಖೆ ಮಾಡಿಸುತ್ತಿದ್ದೇವೆ. ತನಿಖೆಯ ಮಧ್ಯದಲ್ಲಿ ನಾವು ಯಾರೂ ಮಧ್ಯ ಪ್ರವೇಶಿಸಿಲ್ಲ ಎಂದು ಹೇಳಿದ್ದಾರೆ.
ವಿದೇಶದಿಂದ ಫಂಡಿಂಗ್ ಬಂದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ದುಡ್ಡು ಬಂದಿರುವುದು ಬಿಜೆಪಿಗೆ. ಇಷ್ಟೆಲ್ಲಾ ಮಾಡುತ್ತಿದ್ದಾರೆ ಎಂದರೇ ಅವರಿಗೆ ಎಲ್ಲಿಂದ ದುಡ್ಡು ಬರತ್ತದೆ ? ಯಾರು ಇಷ್ಟೆಲ್ಲಾ ದುಡ್ಡು ಕೊಡುತ್ತಾರೆ ಇವರಿಗೆ ? ಎಂದು ಪ್ರಶ್ನಿಸಿದ್ದಲ್ಲದೇ, ಎಲ್ಲಾ ವಿಚಾರಗಳನ್ನು ರಾಜಕೀಯ ಮಾಡಬಾರದು. ವಿರೋಧ ಪಕ್ಷ ಟೀಕೆ ಮಾಡಲಿ. ಆದರೇ , ಇವರು ರಾಜಕೀಯಕ್ಕೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಮರು ತನಿಖೆ ಆಗತ್ತದೆಯೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಬಿಐ ತನಿಖೆ ಮಾಡಿ ವರದಿ ಕೊಟ್ಟಿದೆ. ಸುಪ್ರೀಂ ಕೋರ್ಟ್ ಗೆ ಸೌಜನ್ಯ ಕುಟುಂಬ ಹೋಗಲಿ. ಸೌಜನ್ಯ ಪ್ರಕರಣದ ಆರೋಪ ಬಂದಿರುವುದು ವೀರೇಂದ್ರ ಹೆಗಡೆ ಕುಟುಂಬದ ಮೇಲೆ. ಬಿಜೆಪಿ ಅವ್ರು ಯಾರ ಪರ ? ಕೋರ್ಟ್ ಗೆ ಹೋಗುವುದು ಬಿಡುವುದು ಸೌಜನ್ಯ ಕುಟುಂಬದವರಿಗೆ ಸೇರಿದ್ದು. ಬಿಜೆಪಿ ಅವರು ಒಂದು ಕಡೆ ವೀರೇಂದ್ರ ಹೆಗಡೆಗೆ ಜೈ ಎನ್ನುತ್ತಾರೆ, ಇನ್ನೊಂದು ಕಡೆ ಸೌಜನ್ಯ ಪರ ಇದ್ದೇವೆ ಎನ್ನುತ್ತಾರೆ. ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಎಂ ಆಕ್ರೋಶ ಹೊರ ಹಾಕಿದ್ದಾರೆ.
ಸೌಜನ್ಯ ಪರ ಮಹಿಳೆಯೋರ್ವರು ಎಸ್.ಐ.ಟಿಗೆ ದೂರು ನೀಡುವುದಕ್ಕೆ ಬಂದಿರುವುದಕ್ಕೆ ಸಂಬಂಧಿಸಿದ ಪ್ರತಿಕ್ರಿಯಿಸಿರುವ ಸಿಎಂ, ಕೋರ್ಟ್ ಗೆ ಸತ್ಯ ಹೇಳಬೇಕಿತ್ತು. ಇಷ್ಟು ವರ್ಷ ಏನು ಮಾಡುತ್ತಿದ್ದರು. ಸಾಕ್ಷಿ ಸತ್ಯ ಗೊತ್ತಿದ್ದೂ ಯಾಕೆ ಸುಮ್ಮನಿದ್ದರು ? ಆಕೆ ಯಾರ ಸಂಸ್ಥೆಯಲ್ಲಾದರೂ ಇರಲಿ, ಕೋರ್ಟ್ ಗೆ ಸಾಕ್ಷಿ ನೀಡಬೇಕಿತ್ತು ಎಂದಿದ್ದಾರೆ.