ಬೆಂಗಳೂರು : ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ನಗರದ ಭಾಷ್ಯಂ ವೃತ್ತದಲ್ಲಿ ಸಂಚಾರಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಬೆಂಗಳೂರು ಸಂಚಾರ ಪೊಲೀಸರ ಆಹ್ವಾನದ ಮೇರೆಗೆ ಸುರೇಶ್ ಕುಮಾರ್ ಅವರು ಇಂದು ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಿದ್ದು, ಟ್ರಾಫಿಕ್ ಪೊಲೀಸ್ ಆಗಿ ಕಾರ್ಯನಿರ್ವಹಿಸಿರುವುದು ಒಂದು “ಉತ್ತಮ” ಅನುಭವ ಎಂದ ಸುರೇಶ್ ಕುಮಾರ್ ಅವರು, ಪ್ರತಿ ಸೋಮವಾರ ಒಂದು ಗಂಟೆ ಸಂಚಾರಿ ಪೊಲೀಸರ ಕಾರ್ಯ ನಿರ್ವಹಣೆಗೆ ಸಹಾಯ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ನಿಜಕ್ಕೂ ಸಂಚಾರಿ ಪೊಲೀಸರು ಸಂಚಾರ ನಿಯಂತ್ರಣದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಮತ್ತು ಏನೆಲ್ಲಾ ಸಮಸ್ಯೆಗಳಿವೆ ಎಂಬುವುದು ಇಂದು ನನ್ನ ಅನುಭವಕ್ಕೆ ಬಂದಿದೆ. ಒಂದು ದಿನ ಸಂಚಾರಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುವ ಮೂಲಕ ನಾನು ಅಪಾರ ಅನುಭವವನ್ನು ಪಡೆದುಕೊಂಡೆ ಮತ್ತು ಈ ಕೆಲಸವನ್ನು ನಾನು ಆನಂದಿಸಿದೆ. ಬೆಂಗಳೂರು ಸಂಚಾರಿ ಪೊಲೀಸರ ಈ ಉಪಕ್ರಮವು ನಿಜವಾಗಿಯೂ ಸ್ವಾಗತಾರ್ಹಎಂದು ಸುರೇಶ್ ಕುಮಾರ್ ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇಂದು ಒಂದು ರೀತಿಯಲ್ಲಿ ನನಗೆ ಹಬ್ಬದ ವಾತಾವರಣ. ನಾವು ವಿವಿಧ ಹಬ್ಬಗಳು ಮತ್ತು ಕಾರ್ಯಕ್ರಮಗಳನ್ನು ಆಚರಿಸುತ್ತೇವೆ ಮತ್ತು ಭಾಗವಹಿಸುತ್ತೇವೆ. ಆದರೆ ಸಂಚಾರ ಪೊಲೀಸ್ ಸಿಬ್ಬಂದಿಯಾಗಿ ನಾನು ಪಡೆದ ಅನುಭವ ವಿಶಿಷ್ಟವಾಗಿದೆ. ಏಕೆಂದರೆ ಪ್ರಯಾಣಿಕರು ಸಂಚಾರ ನಿಯಮಗಳನ್ನು ಹೇಗೆ ಅನುಸರಿಸುತ್ತಾರೆ ಅಥವಾ ಪ್ರತಿಕ್ರಿಯಿಸುತ್ತಾರೆ ಮತ್ತು ನಿಯಮಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಾನು ವೈಯಕ್ತಿಕವಾಗಿ ತಿಳಿದುಕೊಂಡಿದ್ದೇನೆ ಎಂದು ಸುರೇಶ್ ಕುಮಾರ್ ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಇಂದಿನಿಂದಲೇ ಉದ್ಯೋಗದಾತರಾಗುವತ್ತ ವಿದ್ಯಾರ್ಥಿಗಳು ಚಿಂತನಶೀಲರಾಗಬೇಕು | ದಿವ್ಯಾ ರಂಗೇನಹಳ್ಳಿ



















