Paris Olympics 2024ಗೆ ಬಿಜೆಪಿ ಶಾಸಕಿಯೊಬ್ಬರು ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ 26 ರಿಂದ ಪ್ಯಾರಿಸ್ ನಲ್ಲಿ ಆರಂಭವಾಗಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬಿಜೆಪಿ ಶಾಸಕಿ ಶ್ರೇಯಸಿ ಸಿಂಗ್ (Shreyasi Singh) ಆಯ್ಕೆಯಾಗಿದ್ದಾರೆ. ಶ್ರೇಯಸಿ ಸಿಂಗ್ ಹಿಂದೆ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಗೇಮ್ಸ್ ಶೂಟಿಂಗ್ ಪದಕಗಳನ್ನು ಗೆದ್ದಿದ್ದರು. ಈಗ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೇಯಸಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಹಿಂದೆ ಒಲಿಂಪಿಕ್ಸ್ ಗೆ ಆಯ್ಕೆ ಮಾಡಲಾದ ಶೂಟರ್ ಗಳ ಪಟ್ಟಿಯಲ್ಲಿ ಶ್ರೇಯಸಿ ಸಿಂಗ್ ಅವರ ಹೆಸರು ಇರಲಿಲ್ಲ. ಮನು ಪ್ರಭಾಕರ್ ಏರ್ ಪಿಸ್ತೂಲ್ ಮತ್ತು ಸ್ಪೋರ್ಟ್ಸ್ ಪಿಸ್ತೂಲ್ ಎರಡರಲ್ಲೂ ಅಗ್ರಸ್ಥಾನ ಗಳಿಸಿದ್ದರು. ಎರಡು ವಿಭಾಗಗಳಲ್ಲಿಯೂ ಆಯ್ಕೆಯಾಗಿದ್ದ ಮನು ಪ್ರಭಾಕರ್, ಒಂದೇ ಕೋಟಾದಲ್ಲಿ ಎರಡು ಈವೆಂಟ್ ಗಳಲ್ಲಿ ಸ್ಪರ್ಧಿಸಬಹುದು ಎಂದು ಅವಕಾಶ ನೀಡಲಾಗಿದೆ. ಹೀಗಾಗಿ ಅವರ ಬಳಿಯಿದ್ದ ಒಂದು ಕೋಟಾವನ್ನು ಮಹಿಳಾ ಟ್ರ್ಯಾಪ್ ಶೂಟರ್‌ಗಾಗಿ ಬದಲಿಸಲಾಗಿದೆ. ಹೀಗಾಗಿಯೇ ಶ್ರೇಯಸಿ ಸಿಂಗ್ ಗೆ ಅವಕಾಶ ಸಿಕ್ಕಿದೆ.
ಶ್ರೇಯಸಿ ಸಿಂಗ್, ದಿ. ಮಾಜಿ ಸಚಿವ ದಿಗ್ವಿಜಯ್ ಸಿಂಗ್ ಅವರ ಪುತ್ರಿ. ಅಲ್ಲದೆ ಬಿಹಾರದ ಜಮುಯಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ. ಈಗ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವ ಮೂಲಕ ಬಿಹಾರದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವುದು ನನ್ನ ತಂದೆಯ ದೊಡ್ಡ ಕನಸಾಗಿತ್ತು. ಇದೀಗ ಈ ಕನಸು ನನಸಾಗಿದೆ. ಒಲಂಪಿಕ್ಸ್‌ನಲ್ಲಿ ದೇಶಕ್ಕಾಗಿ ಚಿನ್ನದ ಪದಕ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.