ದಾವಣಗೆರೆ: ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಮೂರೂ ಕ್ಷೇತ್ರಗಳಲ್ಲೂ ಬಿಜೆಪಿ ಹೀನಾಯ ಸೋಲು ಕಂಡಿದ್ದು, ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yathnal) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2023 ರ ಚುನಾವಣೆಯಲ್ಲಿ ವಿಧಾನಸೌಧದ ಹೊರಗೆ ಒಳಗೆ ನಾಲಿಗೆ ಹರಿಬಿಟ್ಟಿದ್ದರು. ಅವರಿಗೆ ಟಿಆರ್ ಪಿ ಮಾತ್ರ ಬೇಕು. ಬಾಯಿ ಚಟಕ್ಕೆ ಏನೇನೋ ಮಾತನಾಡುತ್ತಾರೆ. 2023 ರ ಚುನಾವಣೆಯ ಸೋಲಿಗೆ ಅವರೇ ಕಾರಣರಾಗಿದ್ದರು. ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದು ಹೈಕಮಾಂಡ್. ವಿಜಯೇಂದ್ರ ಅವರನ್ನ ವಿರೋಧ ಮಾಡುವುದು ಒಂದೇ, ಹೈಕಮಾಂಡ್ ವಿರುದ್ಧ ಮಾತನಾಡುವುದು ಒಂದೇ. ಈಗ ಈ ಸೋಲಿಗೂ ಅವರೇ ಕಾರಣ ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ನಿಂದ ಬಂದ ಮೂರ್ನಾಲ್ಕು ಜನ ಯಡಿಯೂರಪ್ಪ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ. ಆದರೆ ಯಡಿಯೂರಪ್ಪರವರು ಸೈಕಲ್ ತುಳಿದು, ಸ್ಕೂಟಿ ಓಡಿಸಿ, ರಸ್ತೆ ಪಕ್ಕ ಮಿರ್ಚಿ ಮಂಡಕ್ಕಿ ತಿಂದು ಪಕ್ಷ ಕಟ್ಟಿದ್ದಾರೆ. ಅವರ ಶ್ರಮದ ಫಲವಾಗಿ ಇಂದು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದೆ. ನಿಮ್ಮಂತಹ ಹರಕು ಬಾಯಿಯಿಂದಲೇ ಇಂದು ಮೂರು ಕ್ಷೇತ್ರದಲ್ಲಿ ಸೋಲಾಗಿದೆ ಎಂದು ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.