ಬೆಂಗಳೂರು: ರಸ್ತೆಗುಂಡಿಗಳನ್ನು ಮುಚ್ಚಲು ಸರ್ಕಾರ ಗಡುವುಗಳನ್ನು ಕೊಡುತ್ತಿದ್ದರೂ ಬೆಂಗಳೂರಿನಲ್ಲಿ ಗುಂಡಿ ಮುಚ್ಚುವ ಕೆಲಸದಲ್ಲಿ ಪ್ರಗತಿ ಕಾಣುತ್ತಿಲ್ಲ. ಜೊತೆಗೆ ಕಸದ ಸಮಸ್ಯೆಯೂ ಹೆಚ್ಚಾಗಿದೆ. ಈ ಮಧ್ಯೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಇಂದಿನಿಂದ ಎರಡನೇ ರೌಂಡ್ ಗುಂಡಿ ಮತ್ತು ಕಸದ ಚಳುವಳಿ ಶುರು ಮಾಡಿದ್ದಾರೆ.
ಗುಂಡಿ, ಗುಂಡಿ ಎಲ್ನೋಡಿದರು ಗುಂಡಿ. ಗುಂಡಿಗಳ ಜೊತೆ ಕಸದ ರಾಶಿ, ರಾಶಿ ದರ್ಶನ. ಜನಾಕ್ರೋಶಕ್ಕೆ ಸರ್ಕಾರ ಕಿವುಡಾಗಿದ್ದರೆ, ಬಿಜೆಪಿ ದನಿಯಾಗುವ ಪ್ರಯತ್ನ ಮಾಡಿದೆ. ಇಂದಿನಿಂದ ಬಿಜೆಪಿ ಸೆಕೆಂಡ್ ರೌಂಡ್ ಗುಂಡಿ ಚಳುವಳಿ ಕೈಗೆತ್ತಿಕೊಂಡಿದೆ. ಈ ಬಾರಿ ರಸ್ತೆ ಗುಂಡಿ ಜೊತೆ ಕಸ ಸಮಸ್ಯೆಯನ್ನೂ ಕೇಸರಿ ಪಡೆ ಅಸ್ತ್ರವನ್ನಾಗಿ ಮಾಡಿಕೊಂಡಿದೆ.
ಬಿಜೆಪಿ ನಾಯಕರಾದ ಆರ್.ಅಶೋಕ್, ಅಶ್ವಥ್ ನಾರಾಯಣ, ಸುರೇಶ್ ಕುಮಾರ್, ಪಿ.ಸಿ ಮೋಹನ್, ಮುನಿರತ್ನ ಮತ್ತಿತರರು ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರಗಳಲ್ಲಿ ಗುಂಡಿ ಹಾಗೂ ಕಸದ ಪಾಯಿಂಟ್ ಇನ್‌ಸ್ಪೆಕ್ಷನ್ ಮಾಡಿದರು. ಮೊದಲು ವಿಜಯನಗರ-ನಾಗರಭಾವಿ ಮುಖ್ಯರಸ್ತೆಯಲ್ಲಿ ಇನ್ನೂ ಮುಚ್ಚದ ರಸ್ತೆಗುಂಡಿ ಸುತ್ತಲೂ ವೈಟ್ ಪೇಯಿಂಟ್ ಸ್ಪ್ರೇ ಮಾಡಿ. ಇದು ಬ್ರ‍್ಯಾಂಡ್ ಬೆಂಗಳೂರು ಎಂದು ಪೇಯಿಂಟ್ ಸ್ಪ್ರೇ ಮೂಲಕ ಗುಂಡಿ ಮೇಲೆ ಬರೆದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಪ್ಲೇಕಾರ್ಡ್‌ಗಳನ್ನು ಹಿಡಿದುಕೊಂಡು ಅಭಿಯಾನ ನಡೆಸಿದರು.
ಇನ್ನು ಗೋವಿಂದರಾಜನಗರ ಕ್ಷೇತ್ರದ 12ನೇ ಮುಖ್ಯ ರಸ್ತೆಯಲ್ಲಿ ಕಸದ ರಾಶಿ ಇದ್ದು, ಬಹಳ ದಿನಗಳಿಂದ ತೆಗೆದಿರಲಿಲ್ಲ. ವಿಲೇವಾರಿ ಮಾಡದೇ ರಸ್ತೆ, ಫುಟ್‌ಪಾತ್‌ನಲ್ಲೇ ಕಸ ಚೆಲ್ಲಾಪಿಲ್ಲಿಯಾಗಿತ್ತು. ಈ ಕಸದ ಸ್ಥಳಕ್ಕೆ ಭೇಟಿ ಕೊಟ್ಟ ಬಿಜೆಪಿ ನಾಯಕರು. ಪ್ಲೇಕಾರ್ಡ್‌ಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಇದೇ ವೇಳೆ ಬಹಳ ದಿನಗಳಿಂದ ಕಸ ವಿಲೇವಾರಿ ಮಾಡಿಲ್ಲ ಎಂದುಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋವಿಂದರಾಜನಗರ ಕ್ಷೇತ್ರದಲ್ಲೇ ಬಿಜೆಪಿ ನಾಯಕರು 17ನೇ ಮುಖ್ಯ ರಸ್ತೆಯಲ್ಲಿ ಮತ್ತೊಂದು ಬೃಹತ್ ರಸ್ತೆಗುಂಡಿಗೆ ಬಣ್ಣ ಬಳಿದು ಪ್ರೊಟೆಸ್ಟ್ ನಡೆಸಿದರು. ಇನ್ನೊಂದು ಕಡೆ ಅಪೂರ್ಣ ಒಳಚರಂಡಿ ಮತ್ತು ರಸ್ತೆ ಕಾಮಗಾರಿ ಸ್ಥಳಕ್ಕೂ ಭೇಟಿ ಕೊಟ್ಟು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಕುಂಟುತ್ತಾ ಸಾಗುತ್ತಿರುವ ಕಾಮಗಾರಿಯ ಮೋರಿ ಮೇಲೆ ಪ್ಲೇಕಾರ್ಡ್‌ಗಳನ್ನು ಹಿಡಿದುಕೊಂಡು ಕೂತು ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ದಾರೆ.
ಇದನ್ನೂ ಓದಿ:ರಾಜ್ಯ ಸರ್ಕಾರದ ಗೃಹ ಇಲಾಖೆ ಸತ್ತು ಹೋಗಿದೆ | ಆರ್. ಅಶೋಕ್ ವಾಗ್ದಾಳಿ


















