ಜೈಪುರ: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಿವೆ. ಭಾರತವು ಆಧುನಿಕ ತಂತ್ರಜ್ಞಾನದ ಅಳವಡಿಕೆಯಲ್ಲಿ ಮುಂದಿದೆ. 5 ಜಿ ತಂತ್ರಜ್ಞಾನದ ಕಾಲದಲ್ಲಿ ನಾವಿದ್ದೇವೆ. ಚಂದ್ರಯಾನದಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ. ಇಷ್ಟಾದರೂ, ಕೆಲವೊಬ್ಬರ ತಲೆಯಲ್ಲಿರುವ ಜಾತಿ ಎಂಬ ಹುಳವು ಇನ್ನೂ ಸತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ರಾಜಸ್ಥಾನದಲ್ಲಿ ಕಾಂಗ್ರೆಸ್ ದಲಿತ ಶಾಸಕರೊಬ್ಬರು ದೇವಾಲಯಕ್ಕೆ ಭೇಟಿ ನೀಡಿದರು ಎಂದು ಬಿಜೆಪಿ ನಾಯಕರೊಬ್ಬರು ಆ ದೇವಾಲಯವನ್ನು ಸ್ವಚ್ಛಗೊಳಿಸಿದ್ದಾರೆ.
ರಾಮನವಮಿ ಹಿನ್ನೆಲೆಯಲ್ಲಿ ಅಲ್ವರ್ ನಲ್ಲಿರುವ ದೇವಾಲಯಕ್ಕೆ ಕಾಂಗ್ರೆಸ್ ದಲಿತ ಶಾಸಕ ಟೀಕಾ ರಾಮ್ ಜುಲ್ಲಿ ಅವರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದರು. “ನಾನೊಬ್ಬ ದಲಿತನಾಗಿ ರಾಮನ ಕುರಿತು ಇರುವ ಗೌರವ ಸಮರ್ಪಿಸಿದ್ದೇನೆ. ಆ ಮೂಲಕ ಕಾಂಗ್ರೆಸ್ ಬಗ್ಗೆ ಜನರಿಗೆ ಇರುವ ತಪ್ಪು ಕಲ್ಪನೆಯನ್ನು ದೂರ ಮಾಡಲು ಯತ್ನಿಸಿದ್ದೇನೆ” ಎಂದು ಭೇಟಿ ಬಳಿಕ ಹೇಳಿದ್ದರು.
ಆದರೆ, ಕಾಂಗ್ರೆಸ್ ಶಾಸಕ ಭೇಟಿ ನೀಡಿದ ಬಳಿಕ ಬಿಜೆಪಿ ನಾಯಕ, ಮಾಜಿ ಶಾಸಕ ಗ್ಯಾನ್ ದೇವ್ ಅಹುಜಾ ಅವರು ದೇವಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಗ್ಯಾನ್ ದೇವ್ ಅಹುಜಾ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಹಾಗಾಗಿ, ಬಿಜೆಪಿಯು ಗ್ಯಾನ್ ದೇವ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ಮತ್ತೊಂದೆಡೆ, ತಮ್ಮ ಕೃತ್ಯವನ್ನು ಗ್ಯಾನ್ ದೇವ್ ಅಹುಜಾ ಅವರು ಸಮರ್ಥಿಸಿಕೊಂಡಿದ್ದಾರೆ. “ಕಾಂಗ್ರೆಸ್ ನಾಯಕರು ರಾಮ ಕೇವಲ ಪೌರಾಣಿಕ ಪಾತ್ರ ಎಂದು ಹೇಳುತ್ತಾರೆ. ರಾಮನ ಅಸ್ತಿತ್ವವನ್ನೇ ಅವರು ಪ್ರಶ್ನಿಸುತ್ತಾರೆ. ಇದೇ ಕಾರಣಕ್ಕಾಗಿ ನಾನು ದೇವಾಲಯವನ್ನು ಸ್ವಚ್ಛಗೊಳಿಸಿದ್ದೇನೆಯೇ ಹೊರತು, ಶಾಸಕರು ದಲಿತ ಎಂಬ ಕಾರಣಕ್ಕಾಗಿ ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.