ಬೆಂಗಳೂರು: ಇಲ್ಲಿನ ಉದಯಗಿರಿ ಗಲಾಟೆಯನ್ನು ಪ್ರಮುಖ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ, ಸರ್ಕಾರದ ವಿರುದ್ಧ ಮುಗಿ ಬೀಳಲು ಮುಂದಾಗಿದೆ. ಈಗಾಗಲೇ ತಮ್ಮ ಪಕ್ಷದಲ್ಲಿನ ರೆಬೆಲ್ಸ್ ಗಳನ್ನು ತಕ್ಕ ಮಟ್ಟಿಗೆ ಹತ್ತಿಕ್ಕುವಲ್ಲಿ ಬಹುತೇಕ ಯಶಸ್ವಿಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜನಾಂದೋಲನದ ಮೂಲಕ ಆಡಳಿತ ಪಕ್ಷಕ್ಕೂ ಟಾಂಗ್ ಕೊಡಲು ಮುಂದಾಗಿದ್ದಾರೆ.
ಇಂದು ಮೈಸೂರಿನಲ್ಲಿ ಬಿಜೆಪಿ ವತಿಯಿಂದ ಜನಾಂದೋಲನ ನಡೆಯಲಿದೆ. ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಗೂ ಕೌಂಟರ್ ಕೊಡಲು ಮುಂದಾಗಿದ್ದಾರೆ. ವಿಜಯೇಂದ್ರ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಇತ್ತೀಚೆಗಷ್ಟೇ ಶಾಸಕ ಯತ್ನಾಳ್ ಆರೋಪಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ವಿಜಯೇಂದ್ರ ಮುಡಾ ವಿರುದ್ಧ ನಾನೇ ಹೋರಾಟ ಮಾಡಿದ್ದೆ ಅಂದಿದ್ದರು. ಈಗ ಜನಾಂದೋಲನ ಮಾಡಿ ಪಕ್ಷದ ಹಾಗೂ ವಿರೋಧ ಪಕ್ಷದ ನಾಯಕರಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ.
ಆದರೆ, ಬಿಜೆಪಿಯ ಜಾಗೃತಿ ಜಾಥಾಕ್ಕೆ ಅನುಮತಿ ಸಿಕ್ಕಿಲ್ಲ. ಸಭೆಗೆ ಅನುಮತಿ ನಿರಾಕರಿಸಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹೀಗಾಗಿ ಬಿಜೆಪಿ ಹೈಕೋರ್ಟ್ ಮೊರೆ ಹೋಗಿದೆ. ಅನುಮತಿ ಸಿಗುತ್ತದೆಯೇ? ಎಂಬುವುದನ್ನು ಕಾದುನೋಡಬೇಕಿದೆ. ಉದಯಗಿರಿ ಗಲಾಟೆಗೆ ಸರ್ಕಾರವೇ ಕಾರಣ ಎಂದು ಬಿಜೆಪಿ ಹಾಗೂ ಕೆಲವು ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದವು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆರೋಪದಡಿ ಅದಕ್ಕೂ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.