ಬೆಂಗಳೂರು : ಕೆ.ಎನ್ ರಾಜಣ್ಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮುಂಗಾರು ಅಧಿವೇಶನದಲ್ಲಿ ವಿಪಕ್ಷ ಬಿಜೆಪಿ ಆಡಳಿತ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಲ್ಮೀಕಿ ಅಸ್ತ್ರ ಪ್ರಯೋಗಕ್ಕೆ ಯೋಜನೆ ರೂಪಿಸಿದೆ.
ಸಂಪುಟದಿಂದ ಕೆ ಎನ್ ರಾಜಣ್ಣ ವಜಾಗೊಳಿಸಿರುವ ವಿಚಾರದ ಮೇಲೆ ಇಂದಿನ ಕಲಾಪದಲ್ಲಿ ಸರ್ಕಾರವನ್ನು ಪ್ರಶ್ನಿಸುವುದಕ್ಕೆ ಬಿಜೆಪಿ ಮುಂದಾಗಿದೆ. ರಾಜಣ್ಣ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗು ಬಾಣ ಹೂಡುವುದಕ್ಕೆ ಚರ್ಚಾ ವಿಷಯಗಳ ಪಟ್ಟಿಯನ್ನೇ ಬಿಜೆಪಿ ತಯಾರಿಸಿಕೊಂಡಿದೆ ಎಂದು ರಾಜಕೀಯ ವಲಯ ವಿಶ್ಲೇಷಿಸಿದೆ.
ತಮ್ಮ ಸಚಿವ ಸ್ಥಾನದ ತಲೆದಂಡಕ್ಕೆ ಪಕ್ಷದಿಂದಲೂ ಪಿತೂರಿ ನಡೆದಿದೆ ಎಂದು ಸ್ವತಃ ರಾಜಣ್ಣ ಅವರೇ ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ರಾಜಣ್ಣ ನೀಡಿರುವ ಹೇಳಿಕೆಯನ್ನೇ ಸರ್ಕಾರಕ್ಕೆ ತಿರುಗುಬಾಣ ಪ್ರಯೋಗಿಸುವುದಕ್ಕೆ ಬಿಜೆಪಿ ಸಿದ್ಧವಾಗಿದೆ.
ರಾಜಣ್ಣ ರಾಜೀನಾಮೆಗಿಂತ, ರಾಜಣ್ಣ ರಾಜೀನಾಮೆಗೆ ಪಿತೂರಿ ಮಾಡಿದವರು ಯಾರು ಎನ್ನುವುದರ ಬಗ್ಗೆಯೇ ಇಂದು ನಡೆಯುವ ಕಲಾಪದಲ್ಲಿ ಬಿಜೆಪಿ ಚರ್ಚೆ ಮಾಡಲಿದೆ. ಇಂದು ರಾಜಣ್ಣ ವಜಾಗೊಳಿಸಿದರ ಬಗ್ಗೆ ಸಿಎಂ ಸಿದ್ದರಾಮಯ್ಯರಿಂದ ಉತ್ತರಕ್ಕೆ ಬಿಜೆಪಿ ಪಟ್ಟು ಹಿಡಿಯಲಿದೆ.
ಸದನಕ್ಕೆ ನಿನ್ನೆಯೇ ಸಿಎಂ ಸಿದ್ದರಾಮಯ್ಯ ಮಾಹಿತಿ ಮತ್ತು ಕಾರಣ ನೀಡಲಿಕ್ಕಿದ್ದಾರೆ ಎಂದು ಹೇಳಲಾಗಿತ್ತು. ಆದರೇ, ಅಂದುಕೊಂಡಂತೆ ನಿನ್ನೆ ಯಾವ ಬೆಳವಣಿಗೆ ಆಗಿಲ್ಲ. ಇಂದು ಸದನಕ್ಕೆ ಕಾರಣಕೇಳಿ ಬಿಜೆಪಿ, ಜೆಡಿಎಸ್ ಕೂಡ ಚರ್ಚೆಗೆ ಮುಂದಾಗಿದ್ದು, ಸಿಎಂ ಸಿದ್ದರಾಮಯ್ಯರಿಂದ ಪ್ರಶ್ನೆ ಉತ್ತರ ಕೋರಿ ಚರ್ಚೆ ಮಾಡಲಿದೆ.
ಸಪ್ಟೆಂಬರ್/ಅಕ್ಟೋಬರ್ ಕ್ರಾಂತಿ ಎಂಬುದು ಕಾಂಗ್ರೆಸ್ ನಲ್ಲಿ ಆಗಸ್ಟ್ ನಲ್ಲೇ ಶುರುಗಾಗಿದ್ದು, ಕಾಂಗ್ರೆಸ್ ನ ಆಂತರಿಕ ಕಚ್ಚಾಟವನ್ನೇ ಪ್ರಬಲ ಅಸ್ತ್ರ ವಾಗಿ ಮಾಡಿಕೊಳ್ಳಲು ಬಿಜೆಪಿ ತಂತ್ರ ಹೂಡಿದೆ.
ಇನ್ನುಳಿದಂತೆ ಧರ್ಮಸ್ಥಳ ಎಸ್ಐಟಿ ಪ್ರಕರಣದ ಬಗ್ಗೆಯೂ ಚರ್ಚೆಗೆ ಬಿಜೆಪಿ, ಶೂನ್ಯ ವೇಳೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಚರ್ಚೆಗೆ ಅವಕಾಶ ಕೇಳಿದ್ದಾರೆ. ಈಗ ಅದರ ಬಗ್ಗೆ ಚರ್ಚೆಗೆ ಕೇಳಿ ಧರ್ಮಸ್ಥಳ ಸಂಸ್ಥೆಯ ಮೇಲೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಹಿಂದುತ್ವ/ ಹಿಂದೂ ಧರ್ಮದ ಅಸ್ತ್ರ ಪ್ರಯೋಗಕ್ಕೆ ಸಿದ್ಧತೆ ನಡೆಸಿದಂತಿದೆ.
ಒಟ್ಟಿನಲ್ಲಿ, ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಆಂತರಿಕ ವೈಷಮ್ಯಗಳ ಬಗ್ಗೆ ಸದನದಲ್ಲಿ ತೀವ್ರ ಚರ್ಚಗೆ ಗ್ರಾಸವಾಗುವಂತೆ ಮಾಡಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕಟ್ಟಿ ಹಾಕುವುದಕ್ಕೆ ತಂತ್ರ ನಡೆದಿದೆ.