ಬೆಂಗಳೂರು : ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಬಿಜೆಪಿಯವರು ದಸರಾ ಉದ್ಘಾಟನೆ ವಿಚಾರವಾಗಿ ವಿವಾದ ಮಾಡುತ್ತಿದ್ದಾರೆ ಅಷ್ಟೆ. ಬಿಜೆಪಿ ಅವರು ಯಾರಾದರು ಒಬ್ಬರು ಹೋಗಿ ಬೂಕರ್ ಪ್ರಶಸ್ತಿ ತರಲಿ ನೋಡೋಣ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ಸವಾಲೆಸೆದಿದ್ದಾರೆ.
ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡಿಸುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಆಯ್ಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರೋಧಾಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ಈ ಬಗ್ಗೆ ಮಾಜಿ ಸಂಸದರು, ಮಾಜಿ ಬಿಜೆಪಿ ಶಾಸಕರು ನಡೆಯಲಾರದ ನಾಣ್ಯಗಳು ಚಾಲ್ತಿಯಲ್ಲಿ ಬರುವುದಕ್ಕೆ ಹೀಗೆ ಮಾತಾಡುತ್ತಿದ್ದಾರೆ. ಸುಖಾಸುಮ್ಮನೆ ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿಲ್ಲವೇ ? ಬಿಜೆಪಿ ಸರ್ಕಾರ ಇದ್ದಾಗ ಅಬ್ದುಲ್ ಕಲಾಂ ಅವರನ್ನು ದಸರಾಗೆ ಕರೆದಿದ್ದರು. ಅವರು ಬಂದಿರಲಿಲ್ಲ. ಕಲಾಂ, ನಿಸಾರ್ ಅಹಮದ್ ಮುಸ್ಲಿಮರು ಎಂದು ಅವರನ್ನು ಕರೆಸಿದ್ದೇ ? ಅವರ ಕೊಡುಗೆ, ಸಾಮರ್ಥ್ಯ ನೋಡಿ ಕರೆಸಿದ್ದೇ ? ನಮ್ಮ ನಾಡಿಗೆ ಅವರು ಕೊಡುಗೆ ಕೊಟ್ಟಿರಲಿಲ್ಲವೇ ? ಕನ್ನಡ ಪರವಾಗಿ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಬಾನು ಮುಷ್ತಾಕ್ ಅವರ ಸಾಧನೆ ನೋಡಿ ಮೆಚ್ಚಿ ನಾವು ಉದ್ಘಾಟನೆಗೆ ಕರೆಸಿದ್ದೇವೆ. ಅದರಲ್ಲಿ ತಪ್ಪೇನಿದೆ. ಮಾಜಿ ಸಂಸದರಿಗೆ ಏನು ಇದರಲ್ಲಿ ಅಷ್ಟು ಕಳಕಳಿ ಎಂದು ಪ್ರಶ್ನಿಸಿದ್ದಾರೆ.
ಟಿಪ್ಪು, ಹೈದರ್ ಅಲಿ ಇದ್ದಾಗಲು ದಸರಾ ನಡೆದಿತ್ತು. ದಸರಾ ಎಂದೂ ನಿಂತಿರಲಿಲ್ಲ. ತಾಯಿ ಚಾಮುಂಡೇಶ್ವರಿಯೇ ಏನು ಮಾತಾಡಲ್ಲ. ಇವರೇ ಚಾಮುಂಡೇಶ್ವರಿ ವಕ್ತಾರರ ತರಹ ಮಾತನಾಡುತ್ತಾರೆ. ಯಾರು ಇವರೆಲ್ಲ ಮಾತಾನಾಡುವುದಕ್ಕೆ ? ಬಿಜೆಪಿ ಅವರ ಕೊಡುಗೆ ಶೂನ್ಯ. ಕರ್ನಾಟಕ, ಭಾಷೆ, ನಾಡಿಗೆ ಕೊಡುಗೆ ಕೊಟ್ಟಿರುವವರು ಉದ್ಘಾಟನೆ ಮಾಡಬಾರದು ಎಂದರೆ ಹೇಗೆ? ಇದು ಬಿಜೆಪಿ ಅವರ ರಾಜಕೀಯ ಅಷ್ಟೇ. ಇವರಿಗೆ ಕೆಲಸ ಇಲ್ಲ ಎಂದು ತೀವ್ರ ವಾಗ್ದಾಳಿ ಮಾಡಿದ್ದಾರೆ.
ಚಾಮುಂಡೇಶ್ವರಿ ಹಿಂದೂಗಳ ಆಸ್ತಿಯಲ್ಲ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅನೇಕ ಕಡೆ ಕೋಮು ಸೌಹಾರ್ದತೆಗೋಸ್ಕರ ಒಟ್ಟಾಗಿ ಕೆಲಸ ಮಾಡುತ್ತಾರೆ. ಹಿಂದೂಗಳು ದರ್ಗಾಕ್ಕೆ ಹೋಗುತ್ತಾರೆ. ಮುಸ್ಲಿಮರು ದೇವಸ್ಥಾನಕ್ಕೆ ಹೋಗುತ್ತಾರೆ. ತಪ್ಪೇನು? ನಮ್ಮೂರಲ್ಲೂ ಇಂತಹ ಪದ್ಧತಿಗಳು ಈಗಲೂ ಇವೆ. ಎಲ್ಲಾ ದೇವರಿಗೆ ಈ ಬಿಜೆಪಿಯವರು ವಕ್ತಾರರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.