ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ, ದಲಿತರ ಹಣ ಕಳ್ಳತನ ಮಾಡಿರುವುದರ ವಿರುದ್ಧ, ಕಾನೂನು ಸುವ್ಯವಸ್ಥೆ ಹಾಳಾಗಿರುವುದರ ವಿರುದ್ಧ, ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ, ಇನ್ನೂ ಅನೇಕ ವಿಷಯಗಳ ವಿರುದ್ಧ ನಾವು ಜನಾಂದೋಲನ ರೂಪಿಸಿ, ನಾವೆಲ್ಲರೂ ಒಟ್ಟಾಗಿ ಹೋರಾಡೋಣ ಬನ್ನಿ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಬಿಜೆಪಿ ಆಹ್ವಾನಿಸಿದೆ.
ಮತಗಳವು ಪ್ರಕರಣ ಸಂಬಂಧಿಸಿದಂತೆ ಹೋರಾಟ ಮಾಡಲು ರಾಹುಲ್ ಗಾಂಧಿಯವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರಿಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪತ್ರ ಬರೆದಿದ್ದು, ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ಕಪಟ ನಾಟಕದ “ಸೂತ್ರದಾರ”ರಿದ್ದಾರೆ, ಅವರಿಂದ ಪ್ರೇರೇಪಿತರಾದ ನೀವು “ಪಾತ್ರದಾರಿ”ಯಾಗಿ ಕರ್ನಾಟಕಕ್ಕೆ ಬರುತ್ತಿದ್ದೀರಿ. ಇಲ್ಲಿಗೆ ಆಗಮಿಸುತ್ತಿರುವ ನಿಮಗೆ ಸ್ವಾಗತ ಕೋರುತ್ತೇನೆ. ದಯವಿಟ್ಟು ನನ್ನ ಈ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ, ನಂತರ ನೈತಿಕತೆ ಬೋಧಿಸುವ ಔದಾರ್ಯ ತೋರಿಸಿ ಎಂದಿದ್ದಾರೆ.
ನೀವು ಈ ಪ್ರಶ್ನೆಗಳಿಗೆ ಉತ್ತರ ನೀಡದೇ ಪ್ರತಿಭಟನೆ ನಡೆಸಿದರೆ, ನೀವು ಕಾಂಗ್ರೆಸ್ ಪಕ್ಷದ ನಾಯಕರಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಮುಂದುವರೆಯುವ ಯೋಗ್ಯತೆ ನಿಮ್ಮಲ್ಲಿಲ್ಲ ಎಂಬ ಸಂದೇಶವೇ ಪ್ರಧಾನವಾಗುತ್ತದೆ ಎಂದು ಹೇಳಿದ್ದಾರೆ.



















