ಬೆಂಗಳೂರು: ಬಿ.ವೈ.ವಿಜಯೇಂದ್ರ ವಿರುದ್ಧ ನಿರಂತರ ಟೀಕೆ ಮಾಡುತ್ತಿರುವ (BJP Infighting) ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿಯ ಕೇಂದ್ರ ಶಿಸ್ತು ಪಾಲನಾ ಸಮಿತಿ ಮತ್ತೊಂದು ಶೋಕಾಸ್ ನೋಟಿಸ್ ನೀಡಿದೆ. ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೆಹಲಿಯಲ್ಲಿರುವ ವೇಳೆಯೇ ನೋಟಿಸ್ ನೀಡಿರುವುದು (BJP Infighting) ಕೌತುಕ ಸೃಷ್ಟಿಸಿದೆ.
ಸೋಮಣ್ಣ ಅವರ ಮನೆಯ ಗೃಹ ಪ್ರವೇಶ ನೆಪದಲ್ಲಿ ದೆಹಲಿಗೆ ತೆರಳಿದ್ದ ಯತ್ನಾಳ್ ಬಣದ ನಾಯಕರು ಕರ್ನಾಟಕ ಭವನದಲ್ಲಿ ಗೌಪ್ಯ ಸಭೆ ನಡೆಸಿದ್ದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ತಟಸ್ಥ ಬಣ ಕೂಡ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ತಟಸ್ಥ ಬಣದ ನಾಯಕರು ಕೂಡ ನಮ್ಮ ಜೊತೆಗಿದ್ದಾರೆ ಎಂದು ಯತ್ನಾಳ್ ಹೇಳಿಕೆ ನೀಡಿದ್ದರು.
72 ಗಂಟೆಗಳಲ್ಲಿ ಉತ್ತರಿಸಲು ಗಡುವು
ಬಿಜೆಪಿ ಶಿಸ್ತು ಪಾಲನಾ ಸಮಿತಿ ಎರಡನೇ ಬಾರಿಗೆ ಯತ್ನಾಳ್ ಅವರಿಗೆ ಶೋಕಾಷ್ ನೋಟಿಸ್ ನೀಡಿದ್ದು, 72 ಗಂಟೆಗಳೊಳಗೆ ಉತ್ತರ ನೀಡುವಂತೆ ಗಡುವು ನೀಡಿದೆ.
ನಿಗದಿತ ಗಡುವಿನಲ್ಲಿ ಉತ್ತರ ನೀಡದಿದ್ದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಯತ್ನಾಳ್ ಅವರು, ಶೋಕಾಸ್ ನೋಟಿಸ್ ನನ್ನ ಕೈಗೆ ತಲುಪಿಲ್ಲ ಎಂದಿದ್ದಾರೆ.
ಬಿಜೆಪಿಯ ಆಂತರಿಕ ಸಂವಿಧಾನದ ನಿಯಮಗಳಲ್ಲಿ ಪ್ರತಿಪಾದಿಸಲಾದ ಶಿಸ್ತು ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದೀರಿ. ನಿಮ್ಮ ನಿರಂತರ ಟೀಕೆ ಮತ್ತು ಶಿಸ್ತು ಉಲ್ಲಂಘನೆಯನ್ನು ಗಮನಿಸಲಾಗಿದೆ. ಈ ಹಿಂದಿನ ಶೋಕಾಸ್ ನೋಟಿಸ್ ಸೂಚನೆಗೆ ನೀಡಿದ್ದ ಪ್ರತಿಕ್ರಿಯೆಯ ಹೊರತಾಗಿಯೂ ಪದೇ ಪದೇ ನಿಯಮ ಉಲ್ಲಂಘನೆ ಮಾಡಿದ್ದೀರಿ, ಹೀಗಿರುವಾಗ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಾರದೇಕೆ ಎಂದು ಪ್ರಶ್ನಿಸಿ ನೋಟಿಸ್ ನೀಡಿದೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಣದ ನಾಯಕರು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ವಿರುದ್ಧ ನಿರಂತರ ಟೀಕೆ ಮಾಡುತ್ತಿದ್ದರು. ಅದರಲ್ಲೂ ಯತ್ನಾಳ್ ಅವರು ಬಹಿರಂಗವಾಗಿ ಟೀಕೆ ಮಾಡುತ್ತಿದ್ದರು.