ಮುಂಬಯಿ: ಪಕ್ಕದ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಚುನಾವಣಾ ಕಾವು ರಂಗೇರಿದೆ. ಈ ಮಧ್ಯೆ ಬಿಜೆಪಿಯು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿಯು ‘ಮಹಾಯತಿ’ ಮೈತ್ರಿಕೂಟದ ಮೂಲಕ ಅಖಾಡಕ್ಕೆ ಇಳಿದಿದೆ. ಬಿಜೆಪಿ ರಾಷ್ಟ್ರೀಯ ನಾಯಕ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಮಾಡಿದ್ದಾರೆ.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿರುವ ಅಮಿತ್ ಶಾ, ಇದು ಬಿಜೆಪಿಯ ಸಂಕಲ್ಪ ಪತ್ರ. ಮಹಾರಾಷ್ಟ್ರ ರಾಜ್ಯದ ಆಶಯಗಳ ನಿರ್ಣಯ ಪತ್ರ. ಪ್ರಣಾಳಿಕೆಯಲ್ಲಿ ರೈತರು, ಮಹಿಳೆಯರು ಮತ್ತು ಯುವಕರ ಮೇಲೆ ಹೆಚ್ಚಿನ ಗಮನಹರಿಸಲಾಗಿದೆ. ಬಡವರ ಕಲ್ಯಾಮಕ್ಕೆ ನಮ್ಮ ಪಕ್ಷ ಯಾವಾಗಲೂ ಬದ್ಧವಾಗಿದೆ ಎಂದಿದ್ದಾರೆ.
ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ, 25 ಲಕ್ಷ ಉದ್ಯೋಗ ಸೃಷ್ಟಿ, ವೃದ್ಧಾಪ್ಯ ವೇತನ 2,100 ರೂ. ನೀಡುವುದು, 25 ಸಾವಿರ ಮಹಿಳಾ ಪೊಲೀಸರ ನೇಮಕ, ಹಳ್ಳಿಗಳಿಗೆ ಉತ್ತಮ ರಸ್ತೆ ಸಂಪರ್ಕ, ಆಶಾ ಕಾರ್ಯಕರ್ತರಿಗೆ ಮಾಸಿಕ 15 ಸಾವಿರ ರೂ. ಗೌರವ ಧನ, ವಿದ್ಯುತ್ ಬಿಲ್‌ಗಳಲ್ಲಿ ಶೇ 30ರಷ್ಟು ರಿಯಾಯತಿ ಸೇರಿದಂತೆ ಹಲವಾರು ಭರವಸೆಗಳನ್ನು ನೀಡಿದೆ.
ಮಹಾಯತಿ’ ಮೈತ್ರಿಕೂಟದಲ್ಲಿ ಬಿಜೆಪಿ 180 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಮಿತ್ರಪಕ್ಷ ಎನ್‌ಸಿಪಿ 52, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 80 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯುತ್ತಿವೆ. ಈ ವೇಳೆ ಕೇಂದ್ರ ಸಚಿವ ಪಿಯೂಷ್ ಘೋಯಲ್, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂಧ್ರ ಫಡ್ನವೀಸ್ ಮುಂತಾದ ನಾಯಕರು ಉಪಸ್ಥಿತರಿದ್ದರು.